ಕೋಡಿ-ಕೋಡಿಬೆಂಗ್ರೆ 492 ಕುಟುಂಬಕ್ಕೆ ಭೂಮಿ ಹಕ್ಕಿನ ಸಮಸ್ಯೆ ಪರಿಹರಿಸುವಂತೆ ಉಸ್ತುವಾರಿ ಸಚಿವರಿಗೆ ಮನವಿ

ಕುಂದಾಪುರ ಮೇ23(ಉಡುಪಿ ಟೈಮ್ಸ್ ವರದಿ): ಕೋಡಿ ಮತ್ತು ಕೋಡಿಬೆಂಗ್ರೆ ಪರಿಸರದ 492 ಕುಟುಂಬದವರ ಭೂಮಿ ಹಕ್ಕಿನ ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿ ಟೀಮ್ ಅಭಿಮತ ಮತ್ತು ಕೋಡಿ ಗ್ರಾಮದ ಪ್ರಮುಖರ ಜೊತೆಗೆ ಉಸ್ತುವಾರಿ ಸಚಿವರಾದ ಎಸ್.ಅಂಗಾರರವರಿಗೆ ಮನವಿ ಸಲ್ಲಿಸಲಾಯಿತು.

ಕೋಡಿ ಗ್ರಾಮದ ಜನರ ಈ ಸಮಸ್ಯೆ ಪರಿಹಾರ ಆಗುವ ತನಕವೂ, ನಾವೆಲ್ಲರೂ ಆ ಗ್ರಾಮಸ್ಥರ ಜೊತೆಗಿದ್ದೇವೆ. ಸರ್ಕಾರ ಸಿಆರ್‍ಝಡ್ ಸಮಸ್ಯೆಯನ್ನು ಪರಿಹಾರ ಮಾಡಿ ಆ ಜನತೆಗೆ ನ್ಯಾಯ ಕೊಡಿಸಲೇ ಬೇಕು ಎಂದು ಮನವಿ ಮಾಡಿಕೊಳ್ಳಲಾಯಿತು. ಈ ವೇಳೆ ಕರಾವಳಿ ಪ್ರಾಧಿಕಾರದ ಅಧ್ಯಕ್ಷರಾದ ಮಟ್ಟಾರ್ ರತ್ನಾಕರ್ ಹೆಗ್ಡೆ, ಲಕ್ಷ್ಮಣ ಸುವರ್ಣ, ಅಶೋಕ್ ತಿಂಗಳಾಯ, ವಾಸು ಬಂಗೇರ ಮತ್ತು ಟೀಮ್ ಅಭಿಮತ ಸದಸ್ಯರು ಜೊತೆಗಿದ್ದರು.

ಈ ಬಗ್ಗೆ ಸಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಟೀಮ್ ಅಭಿಮತದ ವಸಂತ್ ಗಿಳಿಯಾರು ಅವರು ಕೋಟ ಹೋಬಳಿಯ ಕೋಡಿ ಬೆಂಗ್ರೆ ಪ್ರದೇಶದಲ್ಲಿ ನೂರಾರು ವರ್ಷಗಳಿಂದ ಬದುಕು ಕಟ್ಟಿಕೊಂಡಿದ್ದ ಬಹುತೇಕ ಮೀನುಗಾರಿಕಾ ಕುಟುಂಬಕ್ಕೆ ಸರ್ಕಾರಿ ಜಾಗವನ್ನ ಸಕ್ರಮಗೊಳಿಸದ ನಿಟ್ಟಿನಲ್ಲಿ ಹಲವು ಸಮಯದಿಂದ ಪ್ರತಿಭಟನೆ ನಡೆಯುತ್ತಿದೆ. ಕಳೆದ ಸಾರಿ ಪ್ರತಿಭಟನೆ ನಡೆದಾಗ ಸಮಸ್ಯೆಯನ್ನ ಪರಿಹರಿಸುವ ಬಗ್ಗೆ ಕೋಟ ಶ್ರೀನಿವಾಸ ಪೂಜಾರಿಯವರು ಭರವಸೆ ನೀಡಿದ್ದರು, ಇಂದಿಗೂ ಸಮಸ್ಯೆ ಹಾಗೆಯೇ ಉಳಿದಿದೆ. ಒಟ್ಟು ನಾನೂರ ತೊಂಬತ್ತೆರಡು ಕುಟುಂಬಗಳಿಗೆ ಸರ್ಕಾರ ನ್ಯಾಯ ದೊರಕಿಸಿಕೊಡಬೇಕಿದೆ. ಸರ್ಕಾರದ ನೆಲೆಯಲ್ಲಿ 1991 ಕ್ಕೂ ಹಿಂದಿನಿಂದಲೂ ಭೂಮಿಯನ್ನು ಅನುಭವಿಸಿಕೊಂಡಿದ್ದಲ್ಲಿ ಸಕ್ರಮ ಮಾಡುವಂತೆ ಆದೇಶ ನೀಡಲಾಗಿತ್ತು. ಆದರೂ ಸಿಆರ್‍ಝಡ್  ನಿರಾಪೇಕ್ಷಣೆಯ ಸಮಸ್ಯೆಯ ಪರಿಹಾರವಾಗಿಲ್ಲ. 1994 ರಲ್ಲಿ ಇಂತಹದೇ ಸಂದರ್ಭದಲ್ಲಿ ಐದು ಶರತ್ತುಗಳನ್ನ ನೀಡಿ ಸರ್ಕಾರಿ ಭೂಮಿಯನ್ನು ಸಕ್ರಮ ಮಾಡಲಾಗಿತ್ತು. ಆಗ ಕೆಲವೇ ಕುಟುಂಬಗಳು ಇದರ ಪ್ರಯೋಜನ ಪಡೆದಿದ್ದವು.

ಬಳಿಕ 2012 ರಲ್ಲಿ ಮತ್ತೆ ಪುನಃ ಸರ್ಕಾರ ಎಂಟು ಶರತ್ತುಗಳನ್ನ ವಿಧಿಸಿ ಭೂಮಿ ಸಕ್ರಮಗೊಳಿಸುವಂತೆ ಸಂಬಧಿಸಿದ ಇಲಾಖೆಗೆ ಆದೇಶ ಮಾಡಿತ್ತು ಆ ಕರಾರುಗಳಲ್ಲಿ ಸಿಆರ್‍ಝಡ್ ಪ್ರದೇಶದಲ್ಲಿನ ಭೂಮಿಯನ್ನು ಮಂಜೂರು ಮಾಡಲು ರಾಜ್ಯ ಕೋಸ್ಟಲ್ ಝೋನ್ ಮೇಲ್ವಿಚಾರಣ ಪ್ರಾಧಿಕಾರವು ಅಂತಿಮ ಅನುಮೋದನೆ ಕೊಟ್ಟ ನಂತರವೇ ಸಕ್ರಮ ಗೊಳಿಸತಕ್ಕದ್ದು ಎನ್ನುವ ಕರಾರೂ ಸೇರಿದೆ. ಆದರೆ ಸಿಆರ್‍ಝಡ್ ಇಲಾಖೆಗೆ ಸರಿಯಾದ ಮಾರ್ಗದರ್ಶನ ಇಲ್ಲದ ಕಾರಣ ಈ ಆದೇಶಕ್ಕೂ ಬೆಲೆ ಇಲ್ಲದಂತಾಗಿ, ಜನರ ಸಮಸ್ಯೆ ಪರಿಹಾರವಾಗಿಲ್ಲ ಎಂದು ತಿಳಿಸಿದ್ದಾರೆ ಮಾತ್ರವಲ್ಲದೆ ಉಸ್ತುವಾರಿ ಸಚಿವರಿಂದ ನ್ಯಾಯದ ನಿರೀಕ್ಷೆಯನ್ನು ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!