ಪುತ್ತೂರು: ಗಾಂಜಾ ಸಾಗಾಟ ಪ್ರಕರಣ- ಮೂವರ ಬಂಧನ
ಪುತ್ತೂರು, ಮೇ 23: ಗಾಂಜಾ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿ ಗಾಂಜಾ ಸರಬರಾಜುದಾರನ ಸಹಿತ ಮೂವರು ಆರೋಪಿಗಳನ್ನು ಪುತ್ತೂರು ನಗರ ಪೊಲೀಸರು ಬಂಧಿಸಿದ್ದಾರೆ.
ಗಾಂಜಾ ಸರಬರಾಜುದಾರ ಬಂಟ್ವಾಳ ತಾಲೂಕಿನ ವಿಟ್ಲ ಕುಂಡಡ್ಕ ನಿವಾಸಿ ಮಹಮ್ಮದ್ ಮುವಾಝ್(30) ಕಡಬ ತಾಲೂಕಿನ ಕುಂತೂರು ಪೆರಾಬೆ ಗ್ರಾಮದ ಕೋಚಟ್ಟೆ ನಿವಾಸಿ ಶಫೀಕ್ ಕೆ.ವಿ (24) ಮತ್ತು ಕುಂತೂರು ಎರ್ಮಲ ನಿವಾಸಿ ರಾಝಿಕ್(25) ಬಂಧಿತ ಆರೋಪಿಗಳು. ಗಾಂಜಾ ಮಾರಟಕ್ಕೆ ಸಂಬಂದಿಸಿ ಖಚಿತ ಮಾಹಿತಿ ಪಡೆದ ಪೊಲೀಸರು ಪುತ್ತೂರು ತಾಲೂಕಿನ ಶಾಂತಿಗೋಡು ಗ್ರಾಮದ ವೀರಮಂಗಲ ಎಂಬಲ್ಲಿ ಕಾರ್ಯಾಚರಣೆ ನಡೆಸಿ ರೈಲ್ವೇ ಹಳಿಯ ಬಳಿಯಲ್ಲಿ ಶಫೀಕ್ ಕೆ.ವಿ ಹಾಗೂ ರಾಝಿಕ್ ನನ್ನು ಬಂಧಿಸಿದ್ದರು. ಈ ವೇಳೆ ಆರೋಪಿಗಳಿಂದ 21,500 ರೂ. ಮೌಲ್ಯದ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದರು.
ಈ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆರೋಪಿಗಳು ಗಾಂಜಾ ಸರಬರಾಜುದಾರನ ಬಗ್ಗೆ ಮಾಹಿತಿ ನೀಡಿದ್ದಾರೆ. ಅದರಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ಕೆದಿಲ ಗ್ರಾಮದ ಪೇರಮೊಗ್ರು ಎಂಬಲ್ಲಿ ಗಾಂಜಾ ಸರಬರಾಜುದಾರನಾದ ವಿಟ್ಲ ಕುಂಡಡ್ಕ ನಿವಾಸಿ ಮಹಮ್ಮದ್ ಮುವಾಝ್ ಎಂಬಾತನನ್ನು ಬಂಧಿಸಿದ್ದಾರೆ. ಹಾಗೂ ಬಂಧಿತ ಆರೋಪಿಯಿಂದ 2 ಕೆಜಿ ಗಾಂಜಾ, ಪರವಾನಿಗೆರಹಿತ ಪಿಸ್ತೂಲ್, ಸಜೀವ ಗುಂಡುಗಳು, ಕಾರು, ನಗದು ಹಾಗೂ ಇತರ ದಾಖಲೆಗಳ ಸಹಿತ ಒಟ್ಟು 5,86,530 ರೂ. ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಈ ಆರೋಪಿಗಳ ಪತ್ತೆ ಕಾರ್ಯಾಚರಣೆಯಲ್ಲಿ ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೋನಾವಣೆ ಮತ್ತು ಡಿವೈಸ್ಪಿ ಡಾ.ಗಾನ ಪಿ ಕುಮಾರ್ ನಿರ್ದೇಶನದಂತೆ ಪುತ್ತೂರು ನಗರ ಪೊಲೀಸ್ ಠಾಣೆಯ ಇನ್ ಸ್ಪೆಕ್ಟರ್ ಸುನೀಲ್ ಮಾರ್ಗದರ್ಶನದಂತೆ ಎಸ್ಸೈ ನಸ್ರೀನ್ ತಾಜ್ ಚಟ್ಟರಕಿ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಗಳು ಭಾಗವಹಿಸಿದ್ದರು.