| ಬ್ರಹ್ಮಾವರ ಮೇ 23 (ಉಡುಪಿ ಟೈಮ್ಸ್ ವರದಿ): ತಾಲೂಕು ಹೇರೂರು ಗ್ರಾಮದ ಹೇರಂಜೆ ಎಂಬಲ್ಲಿ ತಂತಿ ಬೇಲಿ ಹಾಕುವ ವಿಚಾರಕ್ಕೆ ಸಂಬಂದಿಸಿ ಬ್ರಹ್ಮಾವರ ಠಾಣೆಯಲ್ಲಿ ದೂರು ಪ್ರತಿ ದೂರು ದಾಖಲಾಗಿದೆ.
ಈ ಬಗ್ಗೆ ಸುಲೋಚನಾ ಎನ್ ಶೆಟ್ಟಿ ಎಂಬವರು ಪೊಲಿಸರಿಗೆ ದೂರು ನೀಡಿದ್ದು, ಅದರಂತೆ ಸುಲೋಚನಾ ಎನ್ ಶೆಟ್ಟಿ ಅವರು, ಬ್ರಹ್ಮಾವರದ ಹೇರೂರು ಗ್ರಾಮದ ಹೇರಂಜೆ ಎಂಬಲ್ಲಿ ತಮ್ಮ ಸ್ಥಿರಾಸ್ತಿಯ ಸುತ್ತ ಕಲ್ಲಿನ ಕಂಬ ಹಾಗೂ ತಂತಿಯ ಬೇಲಿ ಹಾಕಿದ್ದು, ಅದನ್ನು ಈ ಹಿಂದೆ ಬಲತ್ಕಾರವಾಗಿ ರಸ್ತೆ ಮಾಡಲು ಹವಣಿಸಿದ್ದು ಈ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುತ್ತದೆ. ಆದರೆ ಮೇ 21 ರಂದು ಸಂಜೆ ವೇಳೆ ಆರೋಪಿಗಳಾದ ದಿನಕರ ಶೆಟ್ಟಿ. ಸುಧಾಕರ ಶೆಟ್ಟಿ, ಸುಧಾಕರ ಹೆಗ್ಡೆ, ಮಂಜುನಾಥ ಹೆಗ್ಡೆ, ಪ್ರೇಮಾ ಶೆಟ್ಟಿ, ಚಂದ್ರ ಶೇಖರ ಶೆಟ್ಟಿ, ಯುವರಾಜ, ಸುಭಾಷ್ ಹೆಗ್ಡೆ ಹಾಗೂ ಸುಮಾರು 15 ಜನರು ಬಂದು ತಂತಿ ಬೇಲಿ ತೆಗೆದು ಹಾಕುವ ಪ್ರಯತ್ನ ಮಾಡಿದ್ದಾರೆ. ಈ ವೇಳೆ ಸುಲೋಚನಾ ಅವರು ಈ ಘಟನೆಯನ್ನು ವಿಡಿಯೋ ಮಾಡಲು ಹೋದಾಗ ಎಲ್ಲಾ ಆರೋಪಿಗಳು ಒಟ್ಟು ಸೇರಿ ಹಲ್ಲೆ ಮಾಡಿ, ಕೊಲೆ ಬೆದರಿಕೆ ಹಾಕಿರುತ್ತಾರೆ. ಅಲ್ಲದೇ ಬೇಲಿ ತಂತಿ, ಕಲ್ಲುಕಂಬಕ್ಕೂ ಹಾನಿ ಮಾಡಿದ್ದಾರೆ ಎಂದು ಪೊಲೀಸರಿಗೆ ನಿಡಿದ ದೂರಿನಲ್ಲಿ ತಿಳಿಸಲಾಗಿದೆ.
ಈ ವಿಚಾರವಾಗಿ ಪ್ರೇಮ ಆರ್ ಶೆಟ್ಟಿ ಎಂಬವರು ಪ್ರತಿದೂರು ದಾಖಲಿಸಿದ್ದು, ಪ್ರೇಮ ಶೆಟ್ಟಿ ಅವರ ಮನೆಗೆ ಹೇರಂಜೆ ರೈಲ್ವೇ ಗೇಟಿನಿಂದ ಅನಾದಿಕಾಲದಿಂದಲೂ ಮಣ್ಣು ರಸ್ತೆ ಇದ್ದು, ಆ ರಸ್ತೆಯನ್ನು ಮೂರು ತಿಂಗಳ ಹಿಂದೆ ಆರೋಪಿ ಸುಲೋಚನಾ ಶೆಟ್ಟಿಯವರು ಅವರ ಸ್ವಂತ ಜಾಗ ಎಂದು ಅನಧೀಕೃತವಾಗಿ ತಂತಿ ಬೇಲಿ ನಿರ್ಮಿಸಿ ಸಂಚಾರಕ್ಕೆ ಅಡ್ಡಿ ಪಡಿಸಿ ಸಾರ್ವಜನಿಕರಿಗೆ ತೊಂದರೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಹಾಗೂ ಮೇ 21 ರಂದು ಸಂಜೆ ವೇಳೆ ಪ್ರೇಮಾ ಆರ್ ಶೆಟ್ಟಿ ಅವರು ಗ್ರಾಮದ 8ರಿಂದ 10 ಇತರ ಮಹಿಳೆಯರೊಂದಿಗೆ ಸೇರಿ ರಸ್ತೆ ತೆರವುಗೊಳಿಸುತ್ತಿರುವಾಗ ಆರೋಪಿ ಸುಲೋಚನಾ ಶೆಟ್ಟಿ ಹಾಗೂ ಅವರ ಗಂಡ ನಾರಾಯಣ ಶೆಟ್ಟಿ ಅಲ್ಲಿಗೆ ಬಂದು ತಂತಿ ಬೇಲಿ ತೆರವಿಗೆ ಆಕ್ಷೇಪ ವ್ಯಕ್ತಪಡಿಸಿ ಹಲ್ಲೆ ಮಾಡಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಈ ಘಟನೆಗೆ ಸಂಬಂಧಿಸಿ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ದೂರು ಪ್ರತಿದೂರು ದಾಖಲಾಗಿದೆ.
| |