ಉಡುಪಿ: ನಗರದಲ್ಲಿ ಮತ್ತೆ ಮುಂದುವರಿದ ಕಳ್ಳತನ ಪ್ರಕರಣ
ಉಡುಪಿ ಮೇ 22 (ಉಡುಪಿ ಟೈಮ್ಸ್ ವರದಿ): ನಗರ ಠಾಣೆಯಲ್ಲಿ ಇಂದು ಎರಡು ಕಳ್ಳತನ ಪ್ರಕರಣ ದಾಖಲಾಗಿದೆ.
ಮುಂಬೈನಿಂದ ಚಿಕಿತ್ಸೆಗೆಂದು ಬಂದಿದ್ದ ಶಾಂತಾ ಆಚಾರ್ಯ ಎಂಬವರು ತಂಗಿದ್ದ ಉಡುಪಿಯ ಕೃಷ್ಣ ಮಠದ ಬಳಿ ಇರುವ ಗೆಸ್ಟ್ ಹೌಸ್ ರೂಮಿನಲ್ಲಿ ಇಟ್ಟಿದ್ದ ನಗದು ಹಾಗೂ ಚಿನ್ನಾಭರಣ ಇದ್ದ ಪರ್ಸ್ ಕಳವುಗೈದಿರುವ ಘಟನೆ ನಡೆದಿದೆ.
ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಸಲುವಾಗಿ ಉಡುಪಿಗೆ ಬಂದಿದ್ದ ಶಾಂತಾ ಆಚಾರ್ಯ ಅವರು ತಂಗಿದ್ದ ಕೃಷ್ಣ ಮಠದ ಬಳಿ ಇರುವ ಗೆಸ್ಟ್ ಹೌಸ್ ನ ರೂಮಿನ ಕಿಟಕಿ ಪಕ್ಕದಲ್ಲಿದ್ದ ಟೇಬಲ್ ಮೇಲೆ ಇರಿಸಿದ್ದ ಚಿನ್ನದ ಕರಿಮಣಿ ಸರ ಮತ್ತು ರೂ. 10,000 ನಗದು ಇದ್ದ ಪರ್ಸ್ ನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿದ್ದಾರೆ. ಮೇ 17 ರಿಂದ ಮೇ 18 ರ ನಡುವಿನ ಅವಧಿಯಲ್ಲಿ ಈ ಕಳ್ಳತನ ನಡೆದಿದ್ದು, ಕಳವಾದ ಸೊತ್ತುಗಳ ಒಟ್ಟು ಮೌಲ್ಯ ರೂ. 50,000 ಆಗಬಹುದು ಎಂಬುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತೊಂದೆಡೆ ಮೇ 19 ರಂದು ತೆಂಕಪೇಟೆ ವಿ.ಟಿ ರಸ್ತೆಯಲ್ಲಿರುವ ಎಂ.ನಾಗರಾಜ್ ಭಟ್ ಎಂಬವರ ಮನೆಯಲ್ಲಿ ಅವರ ಅಕ್ಕ ಒಬ್ಬರೇ ಇದ್ದ ಸಮಯದಲ್ಲಿ ಮನೆಯ ಮುಚ್ಚಿದ ಬಾಗಿಲನ್ನು ತಳ್ಳಿಕೊಂಡು ಮನೆಯ ಒಳಪ್ರವೇಶಿಸಿದ ಕಳ್ಳರು ನಾಗರಾಜ್ ಅವರ ಅಕ್ಕನ ಗಮನಕ್ಕೆ ಬಾರದಂತೆ ಮನೆಯ ಬೆಡ್ ರೂಮ್‌ನಲ್ಲಿ ಟೇಬಲ್ ಮೇಲೆ ಇಟ್ಟಿದ್ದ ಅಂದಾಜು 35,000 ರೂ. ಮೌಲ್ಯದ ಲ್ಯಾಪ್ ಟಾಪ್ ನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.