ಆರು ಬಾರಿ ಅನುತ್ತೀರ್ಣರಾದರೂ ಎದೆಗುಂದದೆ ಐಎಎಸ್ ಅಧಿಕಾರಿಯಾದ ಹೋಟೆಲ್ ವೈಟರ್
ಚೆನ್ನೈ ಮೇ 22: ಜೀವನದಲ್ಲಿ ಏನಾದರೂ ಸಾಧಿಸಬೇಕು ಎಂದು ಬಹಳಷ್ಟು ಜನರು ಕನಸು ಕಂಡಿರುತ್ತಾರೆ. ಅವರಲ್ಲಿ ಅನೇಕರು ಯಾವುದೇ ಅಡೆತಡೆಗಳಿಲ್ಲದೆ ತಮ್ಮ ಕನಸನ್ನು ಸಾಕಾರಗೊಳಿಸುವಳ್ಳಿ ಯಶಸ್ವಿಯಾಗುತ್ತಾರೆ. ಆದರೆ ಇನ್ನು ಕೆಲವರಿಗೆ ಅನೇಕ ಸಮಸ್ಯೆ ಗಳಿಂದಾಗಿ ಕನಸು ಕನಸಾಗಿಯೇ ಉಳಿಯುತ್ತದೆ.
ಆದರೆ ಇಲ್ಲೊಬ್ಬರು ಮಾತ್ರ ತಮ್ಮೆಲ್ಲಾ ಸಮಸ್ಯೆ ಅನಾನುಕೂಲತೆಗಳನ್ನು ಮೆಟ್ಟಿ ನಿಂತು ಸಾಧಿಸುವ ಛಲ ಇದ್ದರೆ ಯಾವುದೇ ಸಮಸ್ಯೆ ಯೂ ಅಡ್ಡಿಯಾಗುವುದಿಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಹೌದು, ತಮಿಳುನಾಡಿನ ವೆಲ್ಲೂರು ಜಿಲ್ಲೆಯ ವಿನವಮಂಗಲಂ ಎಂಬ ಪುಟ್ಟ ಹಳ್ಳಿಯಲ್ಲಿ ಹುಟ್ಟಿ ಬೆಳೆದ ಕೆ.ಜಯಗಣೇಶ್ ಅವರು ಐಎಎಸ್ ಅಧಿಕಾರಿಯಾಗಿ ಸಾಧಾರಣ ವೈಟರ್ ಆಗಿದ್ದುಕೊಂಡೆ ಕಠಿಣ ಪರಿಶ್ರಮದ ಮೂಲಕ ಐಎಎಸ್ ಅಧಿಕಾರಿಯಾಗಿ ಜನರ ಸೇವೆಯಲ್ಲಿ ತೊಡಗಿದ್ದಾರೆ.
ಜಯಗಣೇಶನ್ ಅವರ ತಂದೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಸಾಮಾನ್ಯ ನೌಕರ. ಅದರಲ್ಲಿ ಸಿಗುವ ಅಲ್ಪ ಮೊತ್ತದ ಸಂಬಳವೇ ಇವರ ಕುಟುಂಬಕ್ಕೆ ಆಧಾರವಾಗಿತ್ತು. ಬಡತನದ ಕುಟುಂಬದಿಂದ ಬಂದ ಅವರು ತಮ್ಮ ಗ್ರಾಮದ ಶಾಲೆಯಲ್ಲಿ 8 ನೇ ತರಗತಿಯವರೆಗೆ ಓದಿದ್ದಾರೆ. ಹತ್ತನೇ ತರಗತಿಯನ್ನು ಪೂರ್ಣಗೊಳಿಸಿದ ನಂತರ ಜಯಗಣೇಶ್ ಅವರು ʼಪಾಸಾದ ತಕ್ಷಣ ಕೆಲಸ ಮಾಡಲು ಸಾಧ್ಯವಾಗುವುದಾಗಿʼ ಹೇಳಿದ್ದರಿಂದ ಪಾಲಿಟೆಕ್ನಿಕ್ ಕಾಲೇಜಿಗೆ ಸೇರಿಕೊಂಡರು. ಅಲ್ಲಿ ಅವರು ಪರೀಕ್ಷೆಯಲ್ಲಿ ಶೇಕಡಾ 91 ಅಂಕಗಳೊಂದಿಗೆ ಉತ್ತೀರ್ಣರಾದರು. ನಂತರ ತಂದೈ ಪೆರಿಯಾರ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಓದಿದರು. ಓದು ಮುಗಿದ ನಂತರ ಕಂಪನಿಯೊಂದರಲ್ಲಿ ಕೆಲಸವೂ ಸಿಕ್ಕಿತು, ಅಲ್ಲಿ ತಿಂಗಳಿಗೆ 2,500 ರೂಪಾಯಿ ಸಂಬಳ ಪಡೆಯುತ್ತಿದ್ದರು. ಆದರೆ, ಈ ಸಂಬಳದಲ್ಲಿ ಸಂಸಾರ ನಡೆಸುವುದು ಅಷ್ಟು ಸುಲಭವಲ್ಲ ಎಂದು ಅರಿವಾಯಿತು. ಮತ್ತೊಂದೆಡೆ ಐಎಎಸ್ ಆಗುವ ಕನಸು ಕೂಡ ಇದ್ದಿದ್ದರಿಂದ ಆ ಕೆಲಸ ಬಿಟ್ಟು ಯುಪಿಎಸ್ ಸಿಗೆ ತಯಾರಿ ಆರಂಭಿಸಿದ್ದರು. ಕೆ ಜಯಗಣೇಶ್ ಅವರು ಸಿವಿಲ್ ಸರ್ವೀಸ್ ಪರೀಕ್ಷೆಯನ್ನು ಆಯ್ಕೆ ಮಾಡಿಕೊಂಡಿದ್ದರು. ಆದರೆ ಈ ಪ್ರಯಾಣವನ್ನು ಪೂರ್ಣಗೊಳಿಸುವುದು ಅಷ್ಟು ಸುಲಭವಾಗಿರಲಿಲ್ಲ. ಜಯಗಣೇಶ್ ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ಆರು ಬಾರಿ ಅನುತ್ತೀರ್ಣರಾದರೂ ಎದೆಗುಂದಲಿಲ್ಲ.
ಈ ನಡುವೆ, ಜಯಗಣೇಶ್ ಮತ್ತು ಅವರ ಕುಟುಂಬಕ್ಕೆ ಕೌಟುಂಬಿಕ ಒತ್ತಡ ಹಾಗೂ ಆರ್ಥಿಕ ಸಮಸ್ಯೆಯೂ ತಲೆದೋರಿತ್ತು. ಈ ನಡುವೆ ಹೋಟೆಲ್‌ಗಳ ಪರಿಚಾರಕನಾಗಿ ಅರೆಕಾಲಿಕ ವೃತ್ತಿಯನ್ನು ಅವರು ಆಯ್ದು ಕೊಂಡಿದ್ದರು. ಜಯಗಣೇಶ್ ಅವರು ತಮ್ಮ ಹಳ್ಳಿಯ ಜನರ ದಯನೀಯ ಸ್ಥಿತಿಯ ಬಗ್ಗೆ ಯಾವಾಗಲೂ ಯೋಚಿಸುತ್ತಿದ್ದರು. ತನ್ನ ಹಳ್ಳಿಯ ಜನರು ಬಡವರಾಗಿದ್ದರು ಮತ್ತು ಅವರು ತಮ್ಮ ಹಳ್ಳಿಯ ಜನರನ್ನು ಬಡತನದಿಂದ ಮೇಲೆತ್ತಲು ಸಹಾಯ ಮಾಡಲು ಬಯಸಿದ್ದರು.
ತನ್ನ ಪರಿಶ್ರಮವನ್ನು ನಿಲ್ಲಿಸಿ ಉದ್ಯೋಗವನ್ನು ಆರಿಸಿಕೊಳ್ಳಬೇಕೋ ಅಥವಾ ಏಳನೇ ಬಾರಿಗೆ ಯುಪಿಎಸ್‌ಸಿ ಪರೀಕ್ಷೆಯನ್ನು ತೆಗೆದುಕೊಳ್ಳಬೇಕೋ ಎಂದು ನಿರ್ಧರಿಸುವುದು ಅವರಿಗೆ ತುಂಬಾ ಕಷ್ಟಕರವಾಗಿತ್ತು. ಅಂತಿಮವಾಗಿ, ಅವರು UPSC ಅನ್ನೇ ಆಯ್ಕೆ ಮಾಡಿದರು. ಮತ್ತು ಈ ಪರೀಕ್ಷೆಯಲ್ಲಿ ಅವರು 156 ನೇ ರ್ಯಾಂಕ್ ಗಳಿಸುವ ಮೂಲಕ ತಮ್ಮ ಅವಿರತ ಪರಿಶ್ರಮದ ಪ್ರತಿಫಲ ಪಡೆದರು. ಸ್ವಯಂ ನಂಬಿಕೆ ಮತ್ತು ನಿರಂತರ ಪರಿಶ್ರಮ ಅವರ ಯಶಸ್ಸಿಗೆ ಕಾರಣವಾಯಿತು ಎಂದು ಅವರೇ ಹೇಳಿಕೊಳ್ಳುತ್ತಾರೆ.
ತಮ್ಮ ಯುಪಿಎಸ್.ಸಿ ಸಾಧನೆಯ ಪಯಣದ ಬಗ್ಗೆ ಮಾತನಾಡುವ ಅವರು, “ನನ್ನ ಕನಸನ್ನು ನನಸಾಗಿಸಲು ನನ್ನ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳದೆ ನಾನು ನಿಜವಾಗಿಯೂ ಶ್ರಮಿಸಿದೆ. ನನ್ನ ನಿಜವಾದ ಕೆಲಸ ಈಗ ಪ್ರಾರಂಭವಾಗುತ್ತದೆ. ಬಡತನವನ್ನು ತೊಡೆದುಹಾಕಲು ಮತ್ತು ಎಲ್ಲಾ ಜನರಿಗೆ ಶಿಕ್ಷಣದ ಸಂದೇಶವನ್ನು ತಲುಪಿಸಲು ನಾನು ಶ್ರಮಿಸಲು ಬಯಸುತ್ತೇನೆ. ಬಡತನವನ್ನು ತೊಡೆದುಹಾಕಲು ಶಿಕ್ಷಣವು ಅತ್ಯುತ್ತಮ ಸಾಧನವಾಗಿದೆ, ತಮಿಳುನಾಡು ಕೂಡ ಕೇರಳದಂತೆ ಸಾಕ್ಷರ ರಾಜ್ಯವಾಗಬೇಕೆಂದು ನಾನು ಬಯಸುತ್ತೇನೆ.” ಎನ್ನುತ್ತಾರೆ.
ಹಾಗೂ “ಅಂತಿಮವಾಗಿ, ಫಲಿತಾಂಶಗಳು ಬಂದಾಗ, ನನಗೆ ನನ್ನನ್ನೇ ನಂಬಲಾಗಲಿಲ್ಲ. ಆಯ್ಕೆಯಾದ 700ಕ್ಕೂ ಹೆಚ್ಚು ಅಭ್ಯರ್ಥಿಗಳಲ್ಲಿ 156ನೇ ರ್ಯಾಂಕ್ ಪಡೆದಿದ್ದೆ. ಹಲವು ವರ್ಷಗಳಿಂದ ನಡೆಯುತ್ತಿದ್ದ ಯುದ್ಧವನ್ನು ಗೆದ್ದಂತೆ ಭಾಸವಾಯಿತು. ನಾನು ಹಲವು ವರ್ಷಗಳ ಬಳಿಕ ಮುಕ್ತ ಸಮಾಧಾನವನ್ನು ಅನುಭವಿಸಿದೆ” ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಕೆ.ಜಯಗಣೇಶ್ ಅವರ ಸಾಧನೆ ಅನೇಕರಿಗೆ ಸ್ಪೂರ್ತಿ ದಾಯಕವಾದದ್ದು, ಇತರರಿಗೆ ಮಾದರಿಯಾಗಿದ್ದಾರೆ.