ಕುಂದಾಪುರ ‘ಕಲ್ಪರಸ’ ಅಧ್ಯಯನಕ್ಕೆ ಇಂಡೋನೇಷ್ಯಾ ಅಧಿಕಾರಿಗಳ ತಂಡ ಭೇಟಿ
ಕುಂದಾಪುರ ಮೇ 22: ತಾಲೂಕಿನ ಜಪ್ತಿಯಲ್ಲಿ ಪ್ರಾರಂಭವಾಗಿರುವ ಕಲ್ಪರಸ (ನೀರಾ) ಸಂಸ್ಕರಣಾ ಘಟಕಕ್ಕೆ ಉಕಾಸ ಕಲ್ಪರಸ’ ಅಧ್ಯಯನಕ್ಕೆ ಇಂಡೋನೇಷ್ಯಾ ಅಧಿಕಾರಿಗಳ ತಂಡ ಕುಂದಾಪುರಕ್ಕೆ ಇಂದು ಭೇಟಿ ನೀಡಿದೆ.
ಉಡುಪಿ ಕಲ್ಪರಸ ಕೋಕೊನಟ್ ಆ್ಯಂಡ್ ಆಲ್ ಸ್ಪೈಸಸ್ ಪ್ರೊಡ್ಯುಸರ್ ಕಂಪನಿ (ಉಕಾಸ) ಇದರ ಕಲ್ಪರಸ (ನೀರಾ) ಸಂಸ್ಕರಣಾ ಘಟಕಕ್ಕೆ ಇಂಡೋನೇಷ್ಯಾ ಸರಕಾರದ ಇಂಟರ್ ನೇಷನಲ್ ಕೋಕೊನಟ್ ಕಮ್ಯುನಿಟಿ ಇದರ ಕಾರ್ಯನಿರ್ವಾಹಕ ನಿರ್ದೇಶಕಿ ಜೆಲ್‌ಫಿನಾ ಸಿ.ಎಲೋವ್, ಸಹಾಯಕ ನಿರ್ದೇಶಕಿ ಮೃದುಲಾ ಕೆ. ಇವರ ನೇತೃತ್ವದ ನಾಲ್ವರು ಅಧಿಕಾರಿಗಳ ತಂಡ ಭೇಟಿ ನೀಡಿ, ತೆಂಗಿನ ಮರಗಳಿಂದ ಕಲ್ಪರಸ ಸಂಗ್ರಹಿಸುವ ತಾಂತ್ರಿಕತೆಯ ಬಗ್ಗೆ ಅಧ್ಯಯನ ನಡೆಸಿ, ಕಲ್ಪರಸದ ಸಾಗಾಟ, ಮೌಲ್ಯವರ್ಧನೆ ಹಾಗೂ ಅವುಗಳ ಆರೋಗ್ಯದಾಯಕ ಅಂಶಗಳ ಬಗ್ಗೆ ಅಧ್ಯಯನ ನಡೆಸಿ, ಸಂಪೂರ್ಣ ಮಾಹಿತಿ ಪಡೆದುಕೊಂಡಿತು.
ಉಕಾಸ’ ಕಂಪೆನಿಯ ಅಧ್ಯಕ್ಷ ಸತ್ಯನಾರಾಯಣ ಉಡುಪ ಜಪ್ತಿ ಹಾಗೂ ಸಲಹೆಗಾರ ಮುರಳೀಧರ ಉಳ್ಳೂರು ತಂಡಕ್ಕೆ ಸಮಗ್ರ ಮಾಹಿತಿ ನೀಡಿದರು. ಕಲ್ಪರಸದಿಂದ ಸಕ್ಕರೆ, ಬೆಲ್ಲ, ಜೋನಿ, ವಿನೆಗರ್ ಉತ್ಪಾದನೆಯ ಬಗ್ಗೆ ತಿಳಿಸಿ ಕೊಡಲಾಯಿತು. ಅಲ್ಲದೇ ಕುಂದಾಪುರದಲ್ಲಿರುವ ಕಲ್ಪರಸ ಕೌಂಟರ್(ತೆಂಗಿನ ಕಟ್ಟೆ)ಗೂ ತಂಡ ಭೇಟಿಕೊಟ್ಟು ವೀಕ್ಷಿಸಿತು.
ಇಂಡೋನೇಷ್ಯಾ ಅಧಿಕಾರಿಗಳ ತಂಡದೊಂದಿಗೆ ಸಿಪಿಸಿಆರ್‌ಐ ಕಾಸರಗೋಡು ಇದರ ಹಿರಿಯ ವಿಜ್ಞಾನಿ ಡಾ. ಕೆ.ಬಿ. ಹೆಬ್ಬಾರ್ ಕೂಡ ಆಗಮಿಸಿದ್ದು, ವೈಜ್ಞಾನಿಕ ಸಂಶೋಧನೆಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಹಾಗೂ ಇಂಡೋನೇಷ್ಯಾದ ಅಧಿಕಾರಿಗಳ ತಂಡ ತಮ್ಮ ದೇಶದಲ್ಲಿ ಈ ತಾಂತ್ರಿಕತೆ ಬಳಸಲು ಸಿಪಿಸಿಆರ್‌ಐನಿಂದ ತಾಂತ್ರಿಕತೆ ಖರೀದಿ ಹಾಗೂ ’ಉಕಾಸ’ದ ಚಿಂತನೆಗಳನ್ನು ಅಳವಡಿಸಿಕೊಳ್ಳಲು ಆಸಕ್ತಿ ವ್ಯಕ್ತಪಡಿಸಿದ್ದು, ಆದಷ್ಟು ಶೀಘ್ರವಾಗಿ ಈ ಬಗ್ಗೆ ತೀರ್ಮಾನಿಸುವುದಾಗಿ ತಿಳಿಸಿತು. ಈ ವೇಳೆ ತಂಡ, ‘ಉಕಾಸ’ ಸಂಸ್ಥೆ ತೆಂಗು ಬೆಳೆಗಾರರ ಆದಾಯ ವೃದ್ಧಿಗಾಗಿ ಕೈಗೊಂಡ ಕಾರ್ಯಕ್ರಮಗಳು, ಉದ್ಯೋಗ ಸೃಷ್ಟಿ, ಸಮಾಜಕ್ಕೆ ಆರೋಗ್ಯಯುತ ಪಾನೀಯ ಹಾಗೂ ಉತ್ಪನ್ನಗಳನ್ನು ನೀಡುವ ನಿಟ್ಟಿನಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ಅಧ್ಯಯನ ನಡೆಸಿ, ಮೆಚ್ಚುಗೆ ವ್ಯಕ್ತಪಡಿಸಿತು.