ಪೆಟ್ರೋಲ್-ಡೀಸೆಲ್ ಸುಂಕ ಇಳಿಕೆ ಕುರಿತು ಪರಿಶೀಲನೆ: ಸಿಎಂ ಬೊಮ್ಮಾಯಿ
ಬೆಂಗಳೂರು: ಕೇಂದ್ರ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ತೆರಿಗೆ ಕಡಿತಗೊಳಿಸಿದ್ದು, ರಾಜ್ಯದಲ್ಲಿಯೂ ತೆರಿಗೆ ಕಡಿತ ಕುರಿತು ಪರಿಶೀಲನೆ ನಡೆಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಾನುವಾರ ಹೇಳಿದ್ದಾರೆ.
ದಾವೋಸ್ ಪ್ರವಾಸಕ್ಕೆ ತೆರಳುವುದಕ್ಕೂ ಮುನ್ನ ಆರ್.ಟಿ.ನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಸ್ವಿಟ್ಜರ್ಲೆಂಡ್ನ ದಾವೋಸ್ಗೆ ತೆರಳುತ್ತಿದ್ದು ನಾಳೆ ಮತ್ತು 24ರಂದು ನಡೆಯಲಿರುವ ‘ವಿಶ್ವ ಆರ್ಥಿಕ ಶೃಂಗ’ದಲ್ಲಿ ಭಾಗಿಯಾಗುತ್ತೇನೆ. ಪ್ರಮುಖ ಕೈಗಾರಿಕೋದ್ಯಮಿಗಳನ್ನು ಭೇಟಿಯಾಗುವೆ. ಹೂಡಿಕೆದಾರರನ್ನು ಸೆಳೆಯಲು ಎಲ್ಲ ಪ್ರಯತ್ನ ನಡೆಸಲಾಗುತ್ತದೆ ಎಂದು ಹೇಳಿದರು.
ಈ ತ್ರೈಮಾಸಿಕದಲ್ಲಿ ಭಾರತಕ್ಕೆ ಅತಿ ಹೆಚ್ಚು ವಿದೇಶಿ ನೇರ ಬಂಡವಾಳ ಹರಿದುಬಂದಿದೆ. ಕಳೆದ 4 ತ್ರೈಮಾಸಿಕದಲ್ಲಿ ಕರ್ನಾಟಕಕ್ಕೆ ಅತಿಹೆಚ್ಚು ಬಂಡವಾಳ ಹರಿದು ಬಂದಿತ್ತು. ಈ ಬಾರಿಯೂ ನಮಗೆ ಹೆಚ್ಚು ಬಂಡವಾಳ ಹರಿದು ಬಂದಿದೆ. ಇನ್ನೂ ಹಲವರು ರಾಜ್ಯದಲ್ಲಿ ಬಂಡವಾಳ ಹೂಡಲು ಮುಂದೆ ಬಂದಿದ್ದಾರೆ. ವಿಶೇಷವಾಗಿ ನವೆಂಬರ್ನಲ್ಲಿ ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶ ಮಾಡುತ್ತಿದ್ದೇವೆ. ಅದಕ್ಕೆ ದಾವೋಸ್ ಪ್ರವಾಸದಲ್ಲಿ ದೊಡ್ಡ ಸ್ಪಂದನೆ ಸಿಗಲಿದೆ ಎನ್ನುವ ವಿಶ್ವಾಸವಿದೆ ಎಂದು ತಿಳಿಸಿದರು.
ನಮಗೆ ದಾವೋಸ್ ಪ್ರವಾಸಕ್ಕೆ ತೆರಳಲು ಅತಿಹೆಚ್ಚಿನ ಉತ್ಸಾಹ ಇದೆ. ಕೇವಲ ನಾವು ಒಡಂಬಡಿಕೆ ಮಾಡಿಕೊಳ್ಳುವುದಿಲ್ಲ, ಕೈಗಾರಿಕೆ ಸ್ಥಾಪನೆ ಮಾಡಲು ಕ್ರಮ ಕೈಗೊಳ್ಳಲಿದ್ದೇವೆ. ನಮ್ಮ ಜೊತೆ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಮತ್ತು ಐಟಿಬಿಟಿ ಸಚಿವ ಡಾ.ಅಶ್ವತ್ಥ್ ನಾರಾಯಣ ದಾವೋಸ್ಗೆ ಆಗಮಿಸಲಿದ್ದಾರೆ ಎಂದರು.