ಉಡುಪಿ: ಕಾರಿನೊಳಗೆ ಪೆಟ್ರೋಲ್ ಸುರಿದುಕೊಂಡು ಯುವ ಜೋಡಿ ಆತ್ಮಹತ್ಯೆ?
ಮಂದಾರ್ತಿ ಮೇ 22 (ಉಡುಪಿ ಟೈಮ್ಸ್ ವರದಿ): ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಹೆಗ್ಗುಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊತ್ತೂರು ಎಂಬಲ್ಲಿ ಸುಟ್ಟು ಕರಕಲಾದ ಕಾರಿನೊಳಗೆ ಎರಡು ಮೃತದೇಹ ಪತ್ತೆಯಾಗಿದೆ.
ಮೃತರನ್ನು ಬೆಂಗಳೂರು ಆರ್.ಟಿ.ನಗರದ ಯಶವಂತ ಯಾದವ್, ಜ್ಯೋತಿ ಮೃತರು ಎಂದು ಗುರುತಿಸಲಾಗಿದೆ. ಕಳೆದ ಮೂರು ದಿನಗಳ ಹಿಂದೆ ಇವರು ಬೆಂಗಳೂರಿನಲ್ಲಿ ನಾಪತ್ತೆಯ ಪ್ರಕರಣ ದಾಖಲಾಗಿತ್ತು. ಇವರು ನಿನ್ನೆ ಮಂಗಳೂರಿಗೆ ಬಂದು ಹುಸೇನ್ ಎಂಬವರಿಂದ ಕಾರು ಬಾಡಿಗೆ ಪಡೆದಿದ್ದರು ಎಂದು ತಿಳಿದು ಬಂದಿದೆ. ಕಾರಿನೊಳಗೆ ಪೆಟ್ರೋಲ್ ಸುರಿದುಕೊಂಡು ಯುವ ಜೋಡಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಇಂದು ಮುಂಜಾನೆ 3.30ಗಂಟೆ ಸುಮಾರಿಗೆ ಬೆಂಕಿ ಹೊತ್ತಿ ಉರಿಯುವುದನ್ನು ನೋಡಿದ ಸ್ಥಳೀಯರು ವಿದ್ಯುತ್ ಅವಘಡ ಆಗಿರಬಹುದೇ ಎಂದು ಎದ್ದು ಬಂದು ನೋಡಿದರೆ ಹೊತ್ತಿ ಉರಿಯುವ ಕಾರು ಪತ್ತೆಯಾಗಿದೆ. ಸ್ಥಳೀಯರ ಸಹಾಯದಿಂದ ಬೆಂಕಿ ನಂದಿಸಿದ್ದು, ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಕಾರು ಸುಟ್ಟುಹೋಗಿದ್ದು, ಕಾರಿನಲ್ಲಿ ಎರಡು ಮೃತದೇಹಗಳು ಪತ್ತೆಯಾಗಿದೆ.