ಡಿಕೆಶಿ ಪ್ರಮೋದ್’ರನ್ನು ಓಲೈಸಲು ಪಕ್ಷದ ಉಪಾಧ್ಯಕ್ಷ ಸ್ಥಾನ ಕೊಟ್ಟರು-ಯು.ಆರ್.ಸಭಾಪತಿ

ಉಡುಪಿ ಮೇ 21(ಉಡುಪಿ ಟೈಮ್ಸ್ ವರದಿ): ಪ್ರಮೋದ್ ಮಧ್ವರಾಜ್ ಅವರು ಮುಂದೊಂದು ದಿನ ಬಿಜೆಪಿಗೆ ಆಘಾತ ನೀಡಲಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಶಾಸಕ ಯು.ಆರ್ ಸಭಾಪತಿ ಹೇಳಿದ್ದಾರೆ.

ಈ ವಿಚಾರವಾಗಿ ಮಾತನಾಡಿದ ಅವರು, ಪ್ರಮೋದ್ ಮಧ್ವರಾಜ್ ಕಾಂಗ್ರೆಸ್ ತೊರೆದಿರುವುದರಿಂದ ಕಾಂಗ್ರೆಸ್ ನಲ್ಲಿ ಯಾರಿಗೂ ಪಶ್ಚಾತಾಪ ಪಡುವುದಿಲ್ಲ. ಬದಲಾಗಿ ಪ್ರಮೋದ್ ಮಧ್ವರಾಜ್ ಕಾಂಗ್ರೆಸ್ ಪಕ್ಷ ತೊರೆದದ್ದೇ ಒಳ್ಳೆಯದಾಯಿತು.ಪ್ರಮೋದ್ ಮಧ್ವರಾಜ್ ಅವರಿಗೆ ಉಪಾಧ್ಯಕ್ಷ ಸ್ಥಾನ ನೀಡಿದ ಮರುದಿನವೇ ಅವರು ಬಿಜೆಪಿಗೆ ಸೇರಿದ್ದಾರೆ. ಈ ಹಿಂದೆ ಅವರ ತಾಯಿ ಮನೋರಮಾ ಮಧ್ವರಾಜ್ ಕೂಡ ಬಿಜೆಪಿಗೆ ದ್ರೋಹ ಮಾಡಿದ್ದರು. ಮುಂದೆ ಪ್ರಮೋದ್ ಮಧ್ವರಾಜ್ ಕೂಡ ಅದನ್ನೇ ಮಾಡಲಿದ್ದಾರೆ. ಬಿಜೆಪಿಗೆ ಆಘಾತ ನೀಡಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.

ಅವರು, ಒಂದು ವರ್ಷದಿಂದ ಕಾಂಗ್ರೆಸ್ ನಲ್ಲಿ ಇದ್ದುಕೊಂಡು ಬಿಜೆಪಿಯವರೊಂದಿಗೆ ಸೇರಿಕೊಳ್ಳುತ್ತಿದ್ದರು. ಕಾಂಗ್ರೆಸ್ ನಲ್ಲಿದ್ದಾಗಲೇ ಅವರು ಕೇಸರಿ ಟೋಪಿ ಹಾಕಿ ತಿರುಗಾಡುತ್ತಿದ್ದ ಬಗ್ಗೆ ನಾವು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ತಿಳಿಸಿದ್ದೆವು ಹಾಗೂ ಅವರನ್ನು ಪಕ್ಷದಿಂದ ಆದಷ್ಟು ಬೇಗ ತೆಗೆಯಿಯಿರಿ ಎಂದು ಹೇಳಿದ್ದೆವು. ಆದರೆ ಡಿ.ಕೆ ಶಿವಕುಮಾರ್ ಅವರು ಪ್ರಮೋದ್ ಮಧ್ವರಾಜ್ ಅವರನ್ನು ಓಲೈಸಲು ಪಕ್ಷದ ಉಪಾಧ್ಯಕ್ಷ ಸ್ಥಾನ ಕೊಟ್ಟರು. ಆದರೆ ಇದೀಗ ಕಾಂಗ್ರೆಸ್ ಪಕ್ಷ ತೊರೆದಿರುವುದರಿಂದ ಅವರು ಮುಂದೊಮ್ಮೆ ಪಶ್ಚಾತಾಪ ಪಡಲಿದ್ದಾರೆ ಎಂದು ಹೇಳಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರಕಾರ ಬ್ರಹ್ಮಶ್ರೀ ನಾರಾಯಣ ಗುರುಗಳ ಬಗ್ಗೆ ತೀರಾ ಅವಮಾನಕಾರಿ ರೀತಿಯಲ್ಲಿ ವರ್ತನೆ ಮಾಡಿದ್ದನ್ನು ಕಾಂಗ್ರೆಸ್ ಖಂಡಿಸುತ್ತದೆ ಎಂದ ಅವರು, ಈ ಹಿಂದೆ ಕೇಂದ್ರ ಸರಕಾರ ಗಣರಾಜ್ಯೋತ್ಸವದ ದಿನ ಪರೇಡ್ ನಲ್ಲಿ ನಾರಾಯಣ ಗುರುಗಳ ಟ್ಯಾಬ್ಲೋ ವನ್ನು ತಿರಸ್ಕರಿಸಿತ್ತು. ಇದು ದೇಶಕ್ಕೆ ಮಾಡಿರುವ ಅವರಮಾನ. ನಾರಾಯಣ ಗುರುಗಳು ಒಂದು ಪ್ರದೇಶಕ್ಕೆ, ರಾಜ್ಯಕ್ಕೆ ಸೀಮಿತರಾದವರಲ್ಲ. ಅವರು ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ದೇಶದ ಉದ್ದಗಲಕ್ಕೂ ಹಿಂದುಳಿದ ಮತ್ತು ಶೋಷಿತ ವರ್ಗದವರ ಪರವಾಗಿ ಹೋರಾಟ ಮಾಡಿ ಅವರನ್ನು ಮೇಲಕ್ಕೆತ್ತುವಂತಹ ಕೆಲಸಕ್ಕೆ ಎಲ್ಲರನ್ನೂ ಒಟ್ಟುಗೂಡಿಸುವಲ್ಲಿ ಯಶಸ್ವಿಯಾಗಿದ್ದರು. ಅವರು ತನ್ನದೇ ಆದ ವೈಶಿಷ್ಟ್ಯದಲ್ಲಿ ನಾಯಕತ್ವವನ್ನು ವಹಿಸಿದ್ದರು. ಅವರು ಬಿಲ್ಲವ ಸಮಾಜಕ್ಕೆ ಮಾತ್ರ ಗುರುಗಳು ಆಗಿರಲಿಲ್ಲ ಸಮಸ್ತ ಶೋಷಿತ ಹಿಂದುಳಿದ ವರ್ಗದ ಗುರುಗಳಾಗಿದ್ದರು. ಆದರೆ ಇಂದು ಪಠ್ಯ ಪುಸ್ತಕದಲ್ಲಿ ಇವರ ಕುರಿತ ಪಾಠವನ್ನು ತೆಗೆಯುವಂತಹ ಹ್ಯೇಯ ಕೆಲಸವನ್ನು ಉಗ್ರವಾಗಿ ಖಂಡಿಸುತ್ತೇವೆ. ಇದು ಬಿಜೆಪಿ ರಾಜ್ಯ ಸರಕಾರ ಹಿಂದುಳಿದ ಶೋಷಿತ ವರ್ಗಕ್ಕೆ ಮಾಡಿದ ಅವಮಾನ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!