ಮರಕ್ಕೆ ಕ್ರೂಸರ್ ಡಿಕ್ಕಿ: ನಿಶ್ಚಿತಾರ್ಥ ಮುಗಿಸಿ ವಾಪಸಾಗುತ್ತಿದ್ದ 8 ಮಂದಿ ದಾರುಣ ಸಾವು

ಧಾರವಾಡ ಮೇ.21: ಮದುವೆ ನಿಶ್ಚಿತಾರ್ಥ ಮುಗಿಸಿ ಮರಳುತ್ತಿದ್ದ ವೇಳೆ ಧಾರವಾಡದ ಬಾಡ ಗ್ರಾಮದ ಬಳಿ ನಿನ್ನೆ ತಡರಾತ್ರಿ ಮರಕ್ಕೆ ಕ್ರೂಸರ್ ಡಿಕ್ಕಿ ಹೊಡೆದು ನಡೆದ ಭೀಕರ ರಸ್ತೆ ಅಪಘಾತದಲ್ಲಿ 8 ಮಂದಿ ಸಾವನ್ನಪ್ಪಿದ್ದಾರೆ. 

ಬೆನಕಟ್ಟಿ ಗ್ರಾಮದ ಅನನ್ಯಾ(14), ಹರೀಶ್(13), ಶಿಲ್ಪಾ(34), ನೀಲವ್ವ(60), ಮಧುಶ್ರೀ(20), ಮಹೇಶ್ವರಯ್ಯ (11), ಶಂಭುಲಿಂಗಯ್ಯ (35) ಎಂಬವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಹುಬ್ಬಳ್ಳಿ ಆಸ್ಪತ್ರೆಯಲ್ಲಿ ಚನ್ನವ್ವ(45) ಎಂಬವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಘಟನೆಯಲ್ಲಿ ಹವರು ಗಾಯಗೊಂಡಿದ್ದು, 4 ಜನರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಹುಬ್ಬಳ್ಳಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ನಿಗದಿ ಗ್ರಾಮದ ಯುವಕನ ನಿಶ್ಚಿತಾರ್ಥ ಮುಗಿಸಿಕೊಂಡು ಮನ್ಸೂರು ಗ್ರಾಮದಿಂದ ಬೆನಕಟ್ಟಿಗೆ ಹಿಂದಿರುಗುವಾಗ ರಾತ್ರಿ 1.30ರಿಂದ 2 ಗಂಟೆ ಸುಮಾರಿಗೆ ಭೀಕರ ಅಪಘಾತ ನಡೆದಿದ್ದು, ಕ್ರೂಸರ್ ಚಾಲಕನ ಅಜಾಗರೂಕತೆಯೇ ದುರಂತಕ್ಕೆ ಕಾರಣ ಎನ್ನಲಾಗುತ್ತಿದೆ.

ಮಳೆಯಿಂದಾಗಿ ಮನ್ನೂರು ರೇವಣಸಿದ್ದೇಶ್ವರ ಮಠಕ್ಕೆ ಮದುವೆ ಸ್ಥಳಾಂತರಿಸಿದ್ದರು. ಮದುವೆ ಮುನ್ನ ದಿನ ನಿಶ್ಚಿತಾರ್ಥಕ್ಕೆ ಸಂಬಂಧಿಕರು ತೆರಳಿದ್ದರು. ಇದೀಗ ಅಪಘಾತದಿಂದಾಗಿ ಸಂಭ್ರಮದ ಬದಲಿಗೆ ಮದುವೆ ನಡೆಯಬೇಕಾದ ಸ್ಥಳದಲ್ಲಿ ಸ್ಮಶಾನ ಮೌನ ಆವರಿಸಿದೆ. ಅಪಘಾತ ಸ್ಥಳಕ್ಕೆ ಎಸ್‌ಪಿ ಕೃಷ್ಣಕಾಂತ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಧಾರವಾಡ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!