ಮತಾಂಧವೆಂದು ತಪ್ಪಾಗಿ ಭಾವಿಸಿ ಪಠ್ಯದಲ್ಲಿ ಮೈಸೂರು ಹುಲಿಯೆಂಬ ಬಿರುದನ್ನು ಕೈಬಿಟ್ಟಿರುವುದು ಸರಿಯಲ್ಲ-ಪ್ರೊ.ಬಿ.ಪಿ.ಮಹೇಶ್
ಮೈಸೂರು, ಮೇ.21: ಟಿಪ್ಪು ಸುಲ್ತಾನ್ ಯಾವಾಗ ಹುಲಿಯನ್ನು ಕೊಂದಿದ್ದ ಎಂಬ ಸಂಸದ ಪ್ರತಾಪ್ ಸಿಂಹ ಹೇಳೆಕೆಗೆ ಪ್ರಗತಿಪರ ಚಿಂತಕ ಪ್ರೊ.ಬಿ.ಪಿ.ಮಹೇಶ್ ಚಂದ್ರಗುರು ತಿರುಗೇಟು ನೀಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು,`ಭಾರತದ ಶ್ರೇಷ್ಟ ಚಿಂತಕ, ಆಡಳಿಗಾರ ಮತ್ತು ರಾಷ್ಟ್ರೀಯವಾದಿ ಟಿಪ್ಪು ಸುಲ್ತಾನ್ರವರನ್ನು ಕುರಿತ ಮೈಸೂರಿನ ಸಂಸದ ಪ್ರತಾಪ್ ಸಿಂಹ ಹೇಳಿಕೆ ಇತಿಹಾಸಕ್ಕೆ ಬಗೆದ ಅಪಚಾರ. ಟಿಪ್ಪು ಯಾವಾಗ ಹುಲಿಯನ್ನು ಕೊಂದಿದ್ದ ಎಂದು ಹೇಳಿರುವ ಸಂಸದರು ಯಾವಾಗ ಸಿಂಹವಾಗಿದ್ದರು’ ಎಂಬ ಪ್ರಶ್ನೆಗೆ ಉತ್ತರಿಸಬೇಕಿದೆ ಎಂದು ಆಗ್ರಹಿಸಿದ್ದಾರೆ.
ಹಾಗೂ 18ನೇ ಶತಮಾನದಲ್ಲಿ ಕಾರ್ಲ್ ಮಾಕ್ರ್ಸ್ ಮತ್ತು ಟಿಪ್ಪುಸುಲ್ತಾನ್ ಸಮಾನ ಪ್ರಗತಿಶೀಲ ವಿಚಾರಧಾರೆಗಳಿಂದ ಜಗತ್ತಿನ ಗಮನ ಸೆಳೆದ ಕ್ರಾಂತಿಕಾರಿ ಪುರುಷರು. ಸ್ವಾತಂತ್ರ್ಯ ಪೂರ್ವದಲ್ಲಿ ರಾಷ್ಟ್ರೀಯವಾದಿ ಇತಿಹಾಸಕಾರರೆಂಬ ಹಣೆಪಟ್ಟಿಯನ್ನು ಹೊಂದಿ ದೇಶದ ನೈಜ ಚರಿತ್ರೆಯನ್ನು ಬದಿಗಿಟ್ಟು ಸುಳ್ಳಿನ ಸರಮಾಲೆಯನ್ನು ಇತಿಹಾಸವೆಂದು ನಮ್ಮೆಲ್ಲರ ಮೇಲೆ ಹೇರಿದ ಪಟ್ಟಭದ್ರ ಹಿತಾಸಕ್ತಿಗಳ ಹುನ್ನಾರದಿಂದ ದೇಶದ ಮೂಲನಿವಾಸಿಗಳು, ಅಲ್ಪಸಂಖ್ಯಾತರು ಮತ್ತು ಹಿಂದುಳಿದ ಸಮುದಾಯಗಳು ಬಹಳಷ್ಟು ದುರಂತಕ್ಕೆ ಗುರಿಯಾಗಿದ್ದಾರೆ. ಟಿಪ್ಪು ಮೈಸೂರಿನ ಮಹಾರಾಜರಂತೆ ಬ್ರಿಟಿಷರೊಂದಿಗೆ ರಾಜ್ಯಾಧಿಕಾರಕ್ಕಾಗಿ ಯಾವುದೇ ರಾಜಿಮಾಡಿಕೊಳ್ಳಲಿಲ್ಲ. ಪ್ರಸ್ತುತ ಸಂದರ್ಭದಲ್ಲಿ ಟಿಪ್ಪುವನ್ನು ಹಿಂದುತ್ವವಾದಿಗಳು ಮತಾಂಧವೆಂದು ತಪ್ಪಾಗಿ ಭಾವಿಸಿ ಪಠ್ಯಪುಸ್ತಕದಲ್ಲಿ ಟಿಪ್ಪುಸುಲ್ತಾಲ್ಗೆ “ಮೈಸೂರು ಹುಲಿ”ಯೆಂಬ ಬಿರುದನ್ನು ಕೈಬಿಟ್ಟಿರುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.
ನಾಲ್ಕನೇ ಮೈಸೂರು ಯುದ್ಧದಲ್ಲಿ ಬ್ರಿಟಿಷ್ ವಸಾಹತುವಾದಿಗಳಿಗೆ ಶರಣಾಗುವುದಕ್ಕಿಂತ ಭಾರತಕ್ಕಾಗಿ ಹುತಾತ್ಮನಾಗುವುದು ಸರ್ವಶ್ರೇಷ್ಟವೆಂಬ ದೃಢ ನಿಲುವು ತಾಳಿದರು. ಟಿಪ್ಪು ಮೇ 04, 1799ರಂದು ಶ್ರೀರಂಗಪಟ್ಟಣದಲ್ಲಿ ಬ್ರಿಟಿಷರ ವಿರುದ್ಧ ಹೋರಾಡುತ್ತಲೇ ಹುತಾತ್ಮರಾದಾಗ ಭಾರತದಲ್ಲಿ ರಾಷ್ಟ್ರೀಯತೆ ಮತ್ತು ಸ್ವಾತಂತ್ರ್ಯಗಳ ಒಂದು ಐತಿಹಾಸಿಕ ಅಧ್ಯಾಯ ಕೊನೆಗೊಂಡಿತು. ಗುಲಾಮಗಿರಿಯ ಮತ್ತೊಂದು ಕೊಳಕು ಅಧ್ಯಾಯ ಭಾರತೀಯ ಇತಿಹಾಸದಲ್ಲಿ ಪ್ರಾರಂಭವಾಯಿತು. ಟಿಪ್ಪುವಿನ ಮೃತದೇಹದತ್ತ ಧಾವಿಸಿದ ಜನರಲ್ ಹ್ಯಾರಿಸ್ “ಇಂದು ಭಾರತ ನಮ್ಮದಾಯಿತು” ಎಂದು ಕೇಕೇ ಹಾಕಿದನು.
ವಸಾಹತುವಾದಿಗಳಿಗೆ ಶರಣಾದ ಮೈಸೂರು ರಾಜರು ಹುಲಿಯೇ ಅಥವಾ ದೇಶದ ಸಾರ್ವಭೌಮತ್ವಕ್ಕಾಗಿ ಪ್ರಜ್ಞಾ ಪೂರ್ವಕವಾಗಿ ಪ್ರಾಣಾರ್ಪಣೆ ಮಾಡಿದ ಟಿಪ್ಪು ಹುಲಿಯೇ ಎಂಬುದನ್ನು ಈಗಾಗಲೇ ಕಾಲ ನಿರ್ಧರಿಸಿದೆ. ಟಿಪ್ಪು ಭರತ ಭೂಮಿಗೆ ಕೊಟ್ಟಿದ್ದೇ ಹೆಚ್ಚು, ಪಡೆದದ್ದು ಕಡಿಮೆ ಎಂಬ ಸತ್ಯವನ್ನು ಹಿಂದುತ್ವವಾದಿಗಳ ಪ್ರಧಾನ ವಕ್ತಾರರು ಅರಿಯಬೇಕು. ಟಿಪ್ಪು ಸಾಂಸ್ಕøತಿಕ ಬಹುತ್ವ, ಧರ್ಮ ನಿರಪೇಕ್ಷತೆ ಮತ್ತು ಮೈಸೂರು ಸಂಸ್ಥಾನದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ ಭಾರತೀಯ ಇತಿಹಾಸದಲ್ಲಿ ಮಹತ್ವದ ಸ್ಥಾನ ಗಳಿಸಿದ್ದಾರೆ ಎಂದು ಹೇಳಿದ್ದಾರೆ.