ಸ್ವಾತಂತ್ರ್ಯ ಹೋರಾಟಗಾರರ, ಸಮಾಜ ಸುಧಾರಕರ ಪಾಠ ಕೈ ಬಿಟ್ಟಿರುವುದನ್ನು ಸಿಪಿಐ ವಿರೋಧ
ಉಡುಪಿ: 10ನೇ ತರಗತಿ ಪಠ್ಯ ಪುಸ್ತಕದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್, ಸಮಾಜ ಸುಧಾರಕರಾದ ಶ್ರೀ ನಾರಾಯಣ ಗುರುಗಳು ಮತ್ತು ಪೆರಿಯಾರ್ ಕುರಿತಾದ ಪಾಠಗಳನ್ನು ಕೈ ಬಿಟ್ಟಿರುವುದನ್ನು ಸಿಪಿಐ(ಎಂ) ಉಡುಪಿ ಜಿಲ್ಲಾ ಸಮಿತಿ ವಿರೋಧಿಸುತ್ತದೆ.
ನಾರಾಯಣ ಗುರುಗಳು ಮತ್ತು ಪೆರಿಯಾರ್ ಅವರ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಣೆಯನ್ನು ದೇಶದೆಲ್ಲೆಡೆ ಜನ ಮೆಚ್ಚಿಕೊಂಡದ್ದು ಮಾತ್ರವಲ್ಲದೆ ಅವರ ನೀತಿಗಳನ್ನು ಅನುಕರಿಸಲು ಪ್ರಯತ್ನಿಸುತ್ತಿದ್ದಾರೆ. ಅದನ್ನು ಅಲ್ಲಗಳೆಯುವುದೆಂದರೆ ಸಮಾಜವನ್ನು ಹಿಮ್ಮುಖಕ್ಕೆ ಕೊಂಡೊಯ್ಯಲು ಬಿಜೆಪಿ ಸರಕಾರಗಳು ಮತ್ತು ಸಂಘ ಪರಿವಾರ ವಿಫಲ ಪ್ರಯತ್ನ ಮಾಡುತ್ತಿದೆ ಎಂದೇ ಸಿಪಿಐ(ಎಂ) ಭಾವಿಸುತ್ತದೆ.
ಗಣರಾಜ್ಯೋತ್ಸವ ಪೆರೇಡ್ ಗೆ ಕೇರಳ ಸರಕಾರವು ನಾರಾಯಣ ಗುರುಗಳ ಸ್ತಭ್ಧ ಚಿತ್ರ ಕಳಿಸಲು ನೀಡಿದ ಸೂಚನೆಯನ್ನು ಕೇಂದ್ರ ಸರಕಾರ ತಿರಸ್ಕರಿಸಿದಾಗ ಉಡುಪಿ ಮತ್ತು ಹಲವೆಡೆ ತೀವ್ರ ಪ್ರತಿಭಟನೆ ನಡೆದಿದೆ.ಅದರಲ್ಲಿ ಜಿಲ್ಲಾ ಬಿಜೆಪಿ ಮುಖಂಡರು ಭಾಗವಹಿಸಿದ್ದರು. ಈಗ ರಾಜ್ಯ ಬಿಜೆಪಿ ಸರಕಾರ ನೇಮಿಸಿದ ರೋಹಿತ್ ಚಕ್ರ ತೀರ್ಥ ಸಮಿತಿಯು ನಾರಾಯಣ ಗುರು ಮತ್ತು ಪೆರಿಯಾರ್ ರಾಮಸ್ವಾಮಿ ಅವರ ಪಾಠಗಳನ್ನು ಕೈಬಿಡುತ್ತಿರುವುದು ಕೇವಲ ಕಾಕತಾಳೀಯವಲ್ಲ. ಧ್ವನಿಯಿಲ್ಲದ ಹಿಂದುಳಿದ ವರ್ಗಗಳ ಜನರಿಗಾಗಿ ಹೋರಾಡಿದ ಮಹಾತ್ಮರನ್ನು ಸ್ಮರಿಸುವುದೇ ಅಪರಾಧ ಎಂಬಂತೆ ಬಿಜೆಪಿ ಸರಕಾರಗಳು ವರ್ತಿಸುತ್ತಿವೆ.
ಹೆಸರಾಂತ ಲೇಖಕರಾದ ಅರವಿಂದ ಮಾಲಗತ್ತಿ, ಬಿ.ಟಿ.ಲಲಿತಾ ನಾಯ್ಕ್, ಕೆ.ನೀಲಾ ಮೊದಲಾದವರ ಲೇಖನ, ಕವಿತೆ, ವಚನಗಳನ್ನೂ ಸಹ ಕೈ ಬಿಡಲಾಗಿದೆ ಎಂದು ತಿಳಿದು ಬಂದಿದೆ. ಬಿಜೆಪಿ ನೇತ್ರತ್ವದ ರಾಜ್ಯ ಸರಕಾರವು ಸಮಾಜ ಸುಧಾರಣೆ, ಸಾಮರಸ್ಯ ಬಯಸುವ ಪಾಠ, ಕವಿತೆ, ವಚನಗಳನ್ನು ಕೈ ಬಿಡಬಾರದೆಂದು ಸಿಪಿಐ(ಎಂ) ಆಗ್ರಹಿಸುತ್ತದೆ. ಮುಗ್ಧ ಮಕ್ಕಳ ಮನಸ್ಸುಗಳ ಮೇಲೆ ಮನುವಾದಿ ಚಿಂತನೆಗಳನ್ನು ಹೇರುವ ಸರಕಾರದ ಧೋರಣೆಯನ್ನು ವಿರೋಧಿಸಬೇಕೆಂದು ಜನತೆಯಲ್ಲಿ ಸಿಪಿಐ(ಎಂ) ಮನವಿ ಮಾಡುತ್ತದೆ ಬಾಲಕ್ರಷ್ಣ ಶೆಟ್ಟಿ, ಕಾರ್ಯದರ್ಶಿಸಿಪಿಐ(ಎಂ) ಉಡುಪಿ ಜಿಲ್ಲಾ ಸಮಿತಿ