ಬೆಂಗಳೂರು: ವಿಮಾನ ನಿಲ್ದಾಣದಲ್ಲಿ ಹುಸಿ ಬಾಂಬ್ ಬೆದರಿಕೆ- ಆತಂಕದ ವಾತಾವರಣ ನಿರ್ಮಾಣ
ಬೆಂಗಳೂರು ಮೇ.20: ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿರುವುದಾಗಿ ಬಂದ ಅಪರಿಚಿತ ಕರೆ ಹಿನ್ನೆಲೆಯಲ್ಲಿ ಇಂದು ಕೆಲ ಕಾಲ ವಿಮಾನ ನಿಲ್ದಾಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಬಳಿಕ ಪೊಲೀಸರು ಹಾಗೂ ಸಿಐಎಸ್ಎಫ್ ಭದ್ರತಾ ಪಡೆಯಿಂದ ಕೆಲ ಕಾಲ ಏರ್ ಲೈನ್ಸ್ ಗೇಟ್ ಗಳು ಸೇರಿದಂತೆ ಏರ್ಪೋರ್ಟ್ ಟರ್ಮಿನಲ್ ನಲ್ಲಿ ತೀವ್ರ ತಪಾಸಣೆ ಮಾಡಲಾಗಿದೆ. 2 ಗಂಟೆಗೂ ಅಧಿಕ ಕಾಲ ತಪಾಸಣೆ ನಡೆಸಿದ ಬಳಿಕ ಅದೊಂದು ಹುಸಿ ಬಾಂಬ್ ಕರೆ ಎಂದು ತಿಳಿದು ಬಂದಿದೆ. ಮುಂಜಾನೆ 3:30 ರ ಸುಮಾರಿಗೆ ಪೊಲೀಸ್ ಕಂಟ್ರೋಲ್ ರೂಂ ಗೆ ಅಪರಿಚಿತ ವ್ಯಕ್ತಿ ಕರೆ ಮಾಡಿದ್ದು ಕೆಂಪೇಗೌಡ ವಿಮಾನ ನಿಲ್ದಾಣ ದಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಸಿದ್ದಾನೆ. ಸದ್ಯ ಇದೊಂದು ಹುಸಿ ಬಾಂಬ್ ಕರೆ ಎಂದು ತಿಳಿದು ಬಂದಿದ್ದು, ಅಧಿಕಾರಿಗಳು ಮತ್ತು ಸಿಬ್ಬಂದಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಹಾಗೂ ಈ ಹುಸಿ ಬಾಂಬ್ ಬೆದರಿಕೆ ಕರೆ ಮಾಡಿದವನಿಗಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.