ಕಾಪು: ಕಡಲ್ಕೊರೆತ ತಡೆಗೋಡೆ ಕಾಮಗಾರಿ ವಿಳಂಬ ಖಂಡಿಸಿ ಪ್ರತಿಭಟನೆ

ಕಾಪು ಮೇ.20: ಪುರಸಭಾ ವ್ಯಾಪ್ತಿಯ ಪೊಲಿಪು ವಾರ್ಡಿನ ಸಮುದ್ರ ತೀರದಲ್ಲಿ ಕಡಲ್ಕೊರೆತ ತಡೆಗೋಡೆ ಕಾಮಗಾರಿ ವಿಳಂಬವನ್ನು ಖಂಡಿಸಿ ಇಂದು ಸ್ಥಳೀಯರಿಂದ ಪ್ರತಿಭಟನೆ ನಡೆಯಿತು.

ಈ ವೇಳೆ ಪ್ರತಿಭಟನೆಯಲ್ಲಿ ಭಾಗವಹಿಸಿದ ಮಾಜಿ ಸಚಿವ ವಿನಯಕುಮಾರ್ ಸೊರಕೆ ಅವರು ಮಾತನಾಡಿ, ಈ ಹಿಂದೆ ಸಮುದ್ರ ದಡದಲ್ಲಿ ಹಾಕಲಾಗಿದ್ದ ತಡೆಗೋಡೆಯನ್ನು ತೆರವುಗೊಳಿಸಿ, ಹೊಸತಾಗಿ ಸದೃಢವಾದ ತಡೆಗೋಡೆ ನಿರ್ಮಿಸಿಕೊಡುತ್ತೇವೆ ಎಂದು ವಾಗ್ದಾನ ಮಾಡಿದ್ರು. ಆದ್ರೆ ಯಾವುದೇ ರೀತಿಯ ಕಾಮಗಾರಿಯನ್ನು ಕೈಗೊಳ್ಳದ ಪರಿಣಾಮ ಈ ಪರಿಸರದ 8 ರಿಂದ 10 ಮನೆಗಳು ಮತ್ತು ಹಲವಾರು ತೆಂಗಿನಮರಗಳು ನೀರು ಪಾಲಾಗುವ ಹಂತದಲ್ಲಿವೆ. ಇದರಿಂದಾಗಿ ಸ್ಥಳೀಯ ನಿವಾಸಿಗಳು ಆತಂಕದಿಂದ ಜೀವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಸಮಸ್ಯೆಗೆ ಎರಡು ದಿನದಲ್ಲಿ ಪರಿಹಾರ ನೀಡದಿದ್ದಲ್ಲಿ ಕರಾವಳಿಯಾದ್ಯಂತ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.ಹಾಗೂ ಸ್ಥಳೀಯ ನಿವಾಸಿಗಳು ಮಾಹಿತಿ ನೀಡಿ ಇಲ್ಲಿನ ಪರಿಸ್ಥಿತಿಯನ್ನು ಜಿಲ್ಲಾಧಿಕಾರಿಯವರಿಗೆ, ಕಾರ್ಯ ನಿರ್ವಾಹಕ ಅಭಿಯಂತರರಿಗೆ ಮತ್ತು ಗುತ್ತಿಗೆದಾರರಿಗೆ ಕರೆಮಾಡಿ ಪರಿಸ್ಥಿತಿಯನ್ನು ಮನವರಿಕೆ ಮಾಡಿದ್ದು, ಎಲ್ಲರೂ ಶೀಘ್ರದಲ್ಲೇ ತಡೆಗೋಡೆ ನಿರ್ಮಾಣ ಕಾಮಗಾರಿ ಪ್ರಾರಂಭಿಸುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ, ಇದೀಗ 3 ತಿಂಗಳು ಕಳೆದರೂ ಯಾವುದೇ ರೀತಿಯ ಕ್ರಮ ಕೈಗೊಳ್ಳದಿರುವ ಕಾರಣ ಮತ್ತು ಮಳೆಗಾಲವು ಪ್ರಾರಂಭವಾಗಿದ್ದು ಮನೆ ಮರಗಳು ಸಮುದ್ರ ಪಾಲಾಗುವ ಭೀತಿಯಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಪುರಸಭಾ ಸದಸ್ಯೆ ರಾಧಿಕಾ ಸುವರ್ಣ, ಫರ್ಜಾನಾ, ಶೋಭಾ ಬಂಗೇರ, ಸ್ಥಳೀಯರಾದ ರಾಜೇಶ್ ಮೆಂಡನ್, ಸುಧಾಕರ ಸಾಲ್ಯಾನ್, ಅಶ್ವಿನಿ ಬಂಗೇರ, ಲವ ಕರ್ಕೇರ, ದೇವರಾಜ್ ಕೋಟ್ಯಾನ್ ಮೊದಲಾದವರು ಭಾಗವಹಿಸಿದರು.

Leave a Reply

Your email address will not be published. Required fields are marked *

error: Content is protected !!