ಪಶುವೈದ್ಯೆಯ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣ: ಆರೋಪಿಗಳ ಎನ್‍ಕೌಂಟರ್ ನಕಲಿ
ಬೆಂಗಳೂರು ಮೇ.20: ಹೈದರಾಬಾದ್ ನಲ್ಲಿ 2019 ರಲ್ಲಿ ನಡೆದ ಪಶುವೈದ್ಯೆಯೋರ್ವರ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳ ಪೊಲೀಸ್ ಎನ್‍ಕೌಂಟರ್ `ನಕಲಿ’ ಎಂದು ಸುಪ್ರೀಂ ಕೋರ್ಟ್ ನೇಮಿಸಿದ ನ್ಯಾಯಮೂರ್ತಿ ಸಿರ್ಪುರ್ಕರ್ ಆಯೋಗ ಹೇಳಿದೆ.
ಈ ವಿಚಾರವಾಗಿ ಆಯೋಗ ನೀಡಿರುವ ಅವರದಿಯಲ್ಲಿ ಪ್ರಕರಣದ ಆರೋಪಿಗಳ ಎನ್ ಕೌಂಟರ್ ನಕಲಿ ಎಂದಿರುವ ನ್ಯಾಯಾಲಯ ಪೊಲೀಸರನ್ನು ಕೊಲೆ ಆರೋಪದ ಮೇಲೆ ವಿಚಾರಣೆಗೆ ಶಿಫಾರಸು ಮಾಡಿದೆ. ಹಾಗೂ ಎನ್ ಕೌಂಟರ್‍ನಲ್ಲಿ ಕೊಲ್ಲಲ್ಪಟ್ಟ ನಾಲ್ವರು ಅತ್ಯಾಚಾರ ಮತ್ತು ಕೊಲೆ ಆರೋಪಿಗಳಲ್ಲಿ ಮೂವರು ಅಪ್ರಾಪ್ತ ವಯಸ್ಸಿನ ಬಾಲಕರು ಎಂದು ಸುಪ್ರೀಂಕೋರ್ಟ್‍ನ ಮಾಜಿ ನ್ಯಾಯಾಧೀಶರ ನೇತೃತ್ವದ ಮೂವರು ಸದಸ್ಯರ ಸಮಿತಿ ಹೇಳಿದೆ.
2019 ರ ನ. ಹೈದರಾಬಾದ್ ಬಳಿಯ ಶಂಶಾಬಾದ್‍ನಲ್ಲಿ 26 ವರ್ಷದ ಪಶುವೈದ್ಯೆಯೋರ್ವರನ್ನು ಅತ್ಯಾಚಾರ ಮತ್ತು ಕೊಲೆ ಪ್ರಕರಣ ರಾಷ್ಟ್ರಮಟ್ಟದಲ್ಲಿ ಭಾರೀ ಸಂಚಲನ ಸೃಷ್ಟಿಸಿತ್ತು. ಈ ಪ್ರಕರಣದ ನಾಲ್ವರು ಆರೋಪಿಗಳನ್ನು ಪೊಲೀಸ್ ಕಸ್ಟಡಿಯಲ್ಲಿ ಹತ್ಯೆ ನಡೆಸಿದ್ದನ್ನು ‘ದಿಶಾ ಎನ್‍ಕೌಂಟರ್’ ಎಂದು ಉಲ್ಲೇಖಿಸಲಾಗಿದೆ. ಆಕೆಯ ಗುರುತನ್ನು ರಕ್ಷಿಸಲು ಅತ್ಯಾಚಾರ ಮತ್ತು ಕೊಲೆ ಸಂತ್ರಸ್ತೆಗೆ ಪೊಲೀಸರು ದಿಶಾ ಎಂಬ ಹೆಸರನ್ನು ಇಟ್ಟಿದ್ದಾರೆ. ಎಲ್ಲಾ ಆರೋಪಿಗಳನ್ನು 2019 ರ ಡಿಸೆಂಬರ್ 6 ರಂದು ಬೆಂಗಳೂರು-ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿಯ ಸೇತುವೆಯ ಕೆಳಗೆ ಪೊಲೀಸ್ ಕಸ್ಟಡಿಯಲ್ಲಿ ಕೊಲ್ಲಲಾಯಿತು. ಪೊಲೀಸರ ಪ್ರಕಾರ, ಆರೋಪಿಗಳು ಬಂದೂಕುಗಳನ್ನು ಕಸಿದುಕೊಂಡು ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದರು. ನಂತರ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ಆರೋಪಿಗಳನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ತಿಳಿಸಿದ್ದರು.