ಬಿಜೆಪಿಯಲ್ಲಿ ಪ್ರಮೋದ್ ಮಧ್ವರಾಜ್’ಗೆ ಸರಿಯಾಗಿ ಉಸಿರಾಡುವಂತಾಗಲಿ- ಡಿಕೆಶಿ
ಉಡುಪಿ ಮೇ.20 (ಉಡುಪಿ ಟೈಮ್ಸ್ ವರದಿ): ತಮಗೆ ತಮ್ಮ ಪರಿವಾರಕ್ಕೆ ಎಲ್ಲಾ ನೀಡಿದ್ದ ಕಾಂಗ್ರೆಸ್ ಪಕ್ಷವನ್ನು ತ್ಯಜಿಸಿ ದೊಡ್ಡ ತಪ್ಪು ಮಾಡಿದೆ ಎಂದು ಪ್ರಮೋದ್ ಮಧ್ವರಾಜ್ ಅವರು ಆದಷ್ಟು ಬೇಗ ಪಶ್ಚಾತಾಪ ಪಡಲಿದ್ದಾರೆ ಎಂದು ಕೆ.ಪಿ.ಸಿ.ಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಹೇಳಿದ್ದಾರೆ.
ಇಂದು ಉಡುಪಿಯ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪಕ್ಷ ತ್ಯಜಿಸಿರುವುದು ಅವರು ಸ್ವಇಚ್ಚೆಯಿಂದ ತೆಗೆದುಕೊಂಡಿರುವ ನಿರ್ಧಾರ. ನಮ್ಮ ಪಕ್ಷದಲ್ಲಿ ಉಸಿರುಕಟ್ಟುತ್ತಿದೆ ಎಂದವರಿಗೆ ಬಿಜೆಪಿಯಲ್ಲಿ ಸರಿಯಾಗಿ ಉಸಿರಾಡುವಂತಾಗಲಿ ತುಂಬಾ ಸಂತೋಷ, ಒಳ್ಳೆಯದಾಗಲಿ ಎಂದರು. ಹಾಗೂ ಪ್ರಮೋದ್ ಮಧ್ವರಾಜ್ ನನ್ನ ಪಕ್ಕದಲ್ಲಿ ಕುಳಿತುಕೊಳ್ಳುತ್ತಿದ್ದರು ಆದರೆ ಈಗ ಕೆಳಗಡೆ ಕುಳಿತುಕೊಳ್ಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಅವರು ಪಕ್ಷ ತ್ಯಜಿಸಿದರು ಎಂದು ಯಾವುದೇ ಕಾರ್ಯಕರ್ತರು ಕುಗ್ಗಿಲ್ಲ. ಬದಲಾಗಿ ಕಾರ್ಯಕರ್ತರು ಬಹಳ ಉತ್ಸಾಹದಿಂದ ಇದ್ದಾರೆ. ಕೆಲವು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಗೊಳ್ಳುವ ಇಚ್ಚೆ ವ್ಯಕ್ತಪಡಿಸಿದ್ದಾರೆ. ಉಡುಪಿಯಲ್ಲಿ ಮೆಂಬರ್ ಶಿಪ್ ನ್ನು ಮತ್ತೆ ಪ್ರಾರಂಭಿಸಲಿದ್ದೇವೆ. ಆದಷ್ಟು ಬೇಗ ತೀರ್ಮಾಣ ಮಾಡಿ ಸದ್ಯದಲ್ಲೇ ಚುನಾವಣೆ ಸ್ಪರ್ಧಿಯ ಬಗ್ಗೆ ಮಾಹಿತಿ ನೀಡಲಿದ್ದೇವೆ ಎಂದರು.
ಉದ್ಯೋಗ ಸೃಷ್ಟಿ ಮಾಡುವ ಸಲುವಾಗಿ ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದ ಅವರು, ಉಡುಪಿ, ದ.ಕ ಜಿಲ್ಲೆಯ ಜನರು ಉದ್ಯೋಗ ಸೃಷ್ಟಿ ಮಾಡುವ ಪ್ರಭುದ್ಧತೆ ಹೊಂದಿರುವವರು. ಇಲ್ಲಿಂದ ಉದ್ಯೋಗ ಅರಿಸಿಕೊಂಡು ಬೇರೆಡೆಗೆ ಜನರು ವಲಸೆ ಹೋಗುತ್ತಿರುವುದನ್ನು ತಡೆಗಟ್ಟಬೇಕು. ಯುವಕರು ತಮ್ಮ ಪ್ರತಿಭೆಯನ್ನು ಬಳಸಿಕೊಂಡು ಇಲ್ಲೇ ಉದ್ಯೋಗ ಸೃಷ್ಟಿಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕೃಷ್ಣಮೂರ್ತಿ ಆಚಾರ್ಯ ಕಿನ್ನಿಮೂಲ್ಕಿ, ಯು.ಆರ್.ಸಭಾಪತಿ, ಭಾಸ್ಕರ ರಾವ್ ಕಿದಿಯೂರು, ಕುಶಲ ಶೆಟ್ಟಿ, ನರಸಿಂಹ ಮೂರ್ತಿ.ಬಿ, ಅಣ್ಣಯ್ಯ ಸೇರಿಗಾರ್, ಕಿಶನ್ ಹೆಗ್ಡೆ ಕೊಳ್ಕೆಬೈಲ್, ರೋಶನ್ ಶೆಟ್ಟಿ ಉಪಸ್ಥಿತರಿದ್ದರು.