ಚೀನಾ ಕಂಪೆನಿಯ ಏಜೆಂಟ್’ಗೆ ಆರೋಗ್ಯ ಇಲಾಖೆಯ ಟೆಂಡರ್: ಆದೇಶ ರದ್ದುಪಡಿಸಿದ ಹೈಕೋರ್ಟ್
ಬೆಂಗಳೂರು, ಮೇ.19: ರಾಷ್ಟ್ರೀಯ ಹಿತಾಸಕ್ತಿ ಮತ್ತು ಭಾರತದ ಭದ್ರತೆಯ ಹಿತದೃಷ್ಟಿಯಿಂದ ಚೀನಾ ಕಂಪೆನಿಯೊಂದರ ಏಜೆಂಟ್ ಆಗಿ ಕಾರ್ಯನಿರ್ವಹಿಸುವ ವ್ಯಕ್ತಿಯೊಬ್ಬರಿಗೆ ಸೇರಿದ ಸಂಸ್ಥೆಗೆ ನೀಡಿದ್ದ ಆರೋಗ್ಯ ಇಲಾಖೆಯ ಟೆಂಡರ್ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ.
ಫೋರೆಸ್ ಹೆಲ್ತ್ ಕೇರ್ ಎಲ್.ಎಲ್.ಪಿ ಕಂಪೆನಿಗೆ ನೀಡಿದ್ದ ಟೆಂಡರ್ ಗೆ ತಡೆಯಾಜ್ಞೆ ನೀಡುವಂತೆ ಕೋರಿ ಫಿಲಿಪ್ಸ್ ಇಂಡಿಯಾ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ ವಿಭಾಗೀಯ ನ್ಯಾಯಪೀಠವು, ಸಾಮಾನ್ಯ ಹಣಕಾಸು ನಿಯಮ 2017 ಅನ್ನು ಉಲ್ಲೇಖಿಸಿ, ಭಾರತದೊಂದಿಗೆ ಭೂಗಡಿ ಹಂಚಿಕೊಂಡಿರುವ ಯಾವುದೇ ದೇಶ ಟೆಂಡರ್‍ನಲ್ಲಿ ಪಾಲ್ಗೊಳ್ಳುವಂತಿಲ್ಲ ಎಂದು ಈ ನಿಯಮ ತಿಳಿಸುತ್ತದೆ ಎಂದು ಹೇಳಿದೆ.
ಈ ಅರ್ಜಿಯ ಪ್ರತಿವಾದಿಗಳಾಗಿ ಕರ್ನಾಟಕ ಸರಕಾರದ ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕರನ್ನೂ ಹೆಸರಿಸಲಾಗಿತ್ತು.ಅರ್ಜಿದಾರರ ವಾದ ಆಲಿಸಿದ ನಂತರ ನಾವು ಮಧ್ಯಂತರ ತಡೆಯಾಜ್ಞೆ ನೀಡಲು ನಿರ್ಧರಿಸಿದ್ದೇವೆ ಎಂದು ನ್ಯಾಯಮೂರ್ತಿಗಳಾದ ಕೃಷ್ಣ ಎಸ್.ದೀಕ್ಷಿತ್ ಮತ್ತು ನ್ಯಾಯಮೂರ್ತಿ ಎಸ್.ರಾಚಯ್ಯ ಅವರಿದ್ದ ವಿಭಾಗೀಯ ನ್ಯಾಯಪೀಠವು ಮೇ 5ರಂದು ಹೇಳಿತ್ತು. ಮೇಲ್ನೋಟಕ್ಕೆ ಈ ಟೆಂಡರ್ ಮಂಜೂರಾತಿಯಿಂದ ಸಾಮಾನ್ಯ ಹಣಕಾಸು ನಿಯಮಗಳು ಉಲ್ಲಂಘನೆಯಾಗಿರುವುದು ಕಂಡು ಬಂದಿದೆ. ನೋಂದಣಿಯಾಗದ ಸಂಸ್ಥೆಗಳು ಇಂಥ ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಿವೆ ಎಂದು ನ್ಯಾಯಪೀಠವು ಹೇಳಿತ್ತು.
ಮುಂದಿನ ವಿಚಾರಣೆವರೆಗೆ ಟೆಂಡರ್ ಪ್ರಕ್ರಿಯೆಯನ್ನು ರದ್ದುಪಡಿಸಲಾಗಿದೆ. ಟೆಂಡರ್ ಮಂಜೂರಾತಿ ಪಡೆದಿರುವ ಕಂಪೆನಿಯ 5ನೆ ಪ್ರತಿವಾದಿಯು ಚೀನಾದೊಂದಿಗೆ ಸಂಬಂಧ ಹೊಂದಿದ್ದಾರೆ. ಭಾರತದೊಂದಿಗೆ ಚೀನಾ ಭೂಗಡಿ ಹಂಚಿಕೊಂಡಿದೆ. ಹೀಗಾಗಿ ಆ ಸಂಸ್ಥೆಗೆ ಈ ಟೆಂಡರ್ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಪೀಠವು ಅಭಿಪ್ರಾಯಪಟ್ಟಿದೆ.ಭಾರತದ ಭದ್ರತೆಯ ಹಿತದೃಷ್ಟಿಯಿಂದ ಕೇಂದ್ರ ಸರಕಾರವು ರೂಪಿಸಿರುವ ಈ ನಿಯಮಕ್ಕೆ ಬದ್ಧವಾಗಿರುವುದಾಗಿ ಕರ್ನಾಟಕ ಸರಕಾರವು ಒಪ್ಪಿಕೊಂಡಿದೆ.
ಶಾಂಘೈ ಯುನೈಟೆಡ್ ಇಮೇಜಿಂಗ್ ಹೆಲ್ತ್ ಕೇರ್ ಕಂಪೆನಿ ಲಿಮಿಟೆಡ್ ಚೀನಾದ ಶಾಂಘೈನಲ್ಲಿ ಕೇಂದ್ರ ಕಚೇರಿ ಹೊಂದಿದೆ. ಈ ಕಂಪೆನಿಯ ಏಜೆಂಟ್ ಆಗಿ ಫೋರೆಸ್ ಹೆಲ್ತ್ ಕೇರ್ ಕಾರ್ಯನಿರ್ವಹಿಸುತ್ತದೆ. ಫೋರೆಸ್ ಹೆಲ್ತ್ ಕೇರ್ ಎಲ್‍ಎಲ್‍ಪಿ ಕಂಪೆನಿಗೆ ನೀಡಿದ್ದ ಟೆಂಡರ್‍ಗೆ ತಡೆಯಾಜ್ಞೆ ನೀಡುವಂತೆ ಕೋರಿ ಫಿಲಿಪ್ಸ್ ಇಂಡಿಯಾ ಲಿಮಿಟೆಡ್ ಹೈಕೋರ್ಟ್‍ಗೆ ಮನವಿ ಸಲ್ಲಿಸಿತ್ತು. ಈ ಮನವಿಯನ್ನು ನ್ಯಾಯಾಲಯ ಈ ಮೊದಲು ಪುರಸ್ಕರಿಸಿರಲಿಲ್ಲ. ಇದೀಗ ಈ ಅರ್ಜಿಯ ವಿಚಾರಣೆ ನಡೆಸಿರುವ ನ್ಯಾಯಾಲಯವು ಇಲಾಖೆಯ ಟೆಂಡರ್ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ.