ಮಲ್ಪೆಯ ಆಳಸಮುದ್ರ ಬೋಟ್ ಮುಳುಗಡೆ- 8 ಮಂದಿ ಮೀನುಗಾರರ
ಮಲ್ಪೆ ಮೇ.19: ಭಟ್ಕಳ ಸಮೀಪ ಮುಳುಗಡೆಯಾಗಿದ್ದ ಮೀನುಗಾರಿಕೆಗೆ ತೆರಳಿದ್ದ ಆಳಸಮುದ್ರ ಬೋಟ್ ನಲ್ಲಿದ್ದ 8 ಮಂದಿ ಮೀನುಗಾರರನ್ನು ರಕ್ಷಿಸಲಾಗಿದೆ.
ಸಮುದ್ರದಲ್ಲಿ ಬೋಟು ಸಂಪೂರ್ಣ ಮುಳುಗಡೆಗೊಂಡಿದ್ದು, ಡೀಸೆಲ್, ಬಲೆ ಇನ್ನಿತರ ವಸ್ತುಗಳು ಸಮುದ್ರ ಪಾಲಾಗಿದ್ದು, ಸುಮಾರು 85 ಲಕ್ಷ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಮಲ್ಪೆಯ ಇಮ್ರಾನ್ ಖಾನ್ ಮಾಲೀಕತ್ವದ ಶ್ರೀತೇಜಸ್ ಬೋಟು ಮೇ 12 ರಂದು ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿತ್ತು. ಮೇ 15ರಂದು ರಾತ್ರಿ 11 ಗಂಟೆಗೆ ಭಟ್ಕಳ ಸಮೀಪ ಮೀನುಗಾರಿಕೆ ನಡೆಸುತ್ತಿರುವಾಗ ಬೋಟಿನ ತಳಭಾಗಕ್ಕೆ ಯಾವುದೋ ವಸ್ತು ತಾಗಿ ಬೋಟ್ ನ ಎಂಜಿನ್ ಕೊಠಡಿಗೆ ನೀರು ನುಗ್ಗಿ ಬೋಟ್ ಸಂಪೂರ್ಣ ಮುಳುಗಡೆಯಾಗಿದೆ. ಬೋಟ್ ನೊಳಗಡೆ ನೀರು ನುಗ್ಗುತ್ತಿದ್ದನ್ನು ಎಷ್ಟೇ ಪ್ರಯತ್ನಪಟ್ಟರೂ ನಿಲ್ಲಿಸಲು ಸಾಧ್ಯವಾಗಿಲ್ಲ. ಬಳಿಕ ಸಮೀಪದಲ್ಲಿದ್ದ ಶ್ರೀಸಮುದ್ರ ಸುಂದರಿ ಬೋಟಿನವರು ಈ ಬೋಟನ್ನು ಎಳೆದು ತರಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಸದ್ಯ ಮತ್ತೊಂದು ಬೋಟ್ ನವರು ಈ ಎಂಟು ಮಂದಿ ಮೀನುಗಾರರನ್ನು ರಕ್ಷಿಸಿ ತಮ್ಮ ಬೋಟಿನ ಮೂಲಕ ದಡ ಸೇರಿಸಿದ್ದಾರೆ.