ಉಡುಪಿ ಡೆಂಗ್ಯು ಭೀತಿ ಆಲರ್ಟ್-ಆರೋಗ್ಯಾಧಿಕಾರಿ ಮಾಹಿತಿ
ಉಡುಪಿ: ಕೊಲ್ಲೂರು ಮುದೂರಿನಲ್ಲಿ ಡೆಂಗ್ಯು ಪ್ರಕರಣ ಹೆಚ್ಚಾಗಿ ಕಂಡುಬಂದಿರುವುದರಿಂದ ಉಡುಪಿ ತಾಲೂಕಿನಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಯಾವುದೇ ರೀತಿಯ ಜ್ವರ ಕಂಡುಬಂದವರನ್ನು ರಕ್ತ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಉಡುಪಿ ತಾಲೂಕಿನಲ್ಲಿ ಕಳೆದ ಜನವರಿಂದ ಈವರೆಗೆ 21 ಹಾಗೂ ಎಪ್ರಿಲ್ ನಿಂದ ನಾಲ್ಕು ಡೆಂಗ್ಯು ಪ್ರಕರಣಗಳು ವರದಿಯಾಗಿವೆ ಎಂದು ಉಡುಪಿ ತಾಲೂಕು ಆರೋಗ್ಯಾಧಿಕಾರಿ ಡಾ. ವಾಸುದೇವ ಉಪಾಧ್ಯಾಯ ತಿಳಿಸಿದ್ದಾರೆ.
ಉಡುಪಿ ತಾಲೂಕು ಪಂಚಾಯತ್ ಆಡಳಿತಾಧಿಕಾರಿ ಬಾಬು ಎಂ. ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ತಾಪಂ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು. ಕೊರೋನಾ ಲಸಿಕೆಯಲ್ಲಿ ನಾವು ಗುರಿ ಸಾಧನೆ ಮಾಡಿದ್ದೇವೆ. 60 ವರ್ಷ ಮೇಲ್ಪಟ್ಟವರಿಗೆ ಸರಕಾರ ಉಚಿತವಾಗಿ ಬೂಸ್ಟರ್ ಡೋಸ್ ನೀಡುತ್ತಿದ್ದು, ಅದಕ್ಕಿಂತ ಕೆಳಗಿನವರು ಹಣ ಕೊಟ್ಟು ಪಡೆಯಬೇಕಾಗುತ್ತದೆ. ಶಾಲಾ ಮಕ್ಕಳಿಗೆ ಉಚಿತವಾಗಿ ನೀಡಲಾಗುತ್ತಿದೆ ಎಂದರು. ನಮ್ಮ ಜಿಲ್ಲೆಯಲ್ಲಿ ಟೊಮೆಟೋ ಫ್ಲೂ ಎಲ್ಲೂ ಕಂಡುಬಂದಿಲ್ಲ. 5 ವರ್ಷ ಕೆಳಗಿನ ಮಕ್ಕಳಲ್ಲಿ ಕಂಡುಬರುವ ಈ ಕಾಯಿಲೆಯನ್ನು ಮುಂಬೈ ಅಥವಾ ಬೆಂಗಳೂರಿನ ಪ್ರಯೋಗಾಲಯದಲ್ಲಿಯೇ ಪರೀಕ್ಷೆ ಮಾಡಿಸಬೇಕಾಗುತ್ತದೆ. ತುರ್ತು ಚಿಕಿತ್ಸೆ ನೀಡುವ ಆರೋಗ್ಯ ಕ್ಷೇಮ ಕೇಂದ್ರ ಸ್ಥಾಪಿಸಲು ಅಗತ್ಯ ಕಟ್ಟಡಗಳನ್ನು ಗುರುತಿಸುವ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ಹೇಳಿದರು.