ಪಿಎಸ್‌ಐ ಅಕ್ರಮ ನೇಮಕಾತಿ: ಮದುಮಗ ಸಿಐಡಿ ವಶಕ್ಕೆ
ಬಾಗಲಕೋಟೆ: ಪಿಎಸ್‌ಐ ಅಕ್ರಮ ನೇಮಕಾತಿಗೆ ಸಂಬಂಧಿಸಿದಂತೆ ಧಾರವಾಡದ ಕೋಚಿಂಗ್ ಸೆಂಟರ್’ನ ಮಾಜಿ ನಿರ್ದೇಶಕನನ್ನು ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಬಂಧಿತ ಶ್ರೀಕಾಂತ ದುಂಡಪ್ಪ ಚೌರಿ ಜಮಖಂಡಿ ತಾಲ್ಲೂಕಿನ ತೊದಲಬಾಗಿ ನಿವಾಸಿ. ಮೇ 14ರಂದು ಜಮಖಂಡಿ ನಗರದಲ್ಲಿ ಮದುವೆ ಆಗಿದ್ದರು. ಬುಧವಾರ ಮೊದಲ ರಾತ್ರಿಯ ಸಂಭ್ರಮದಲ್ಲಿದ್ದ ಅವರು ಪತ್ನಿಯ ತವರು ಬೆಳಗಾವಿ ಜಿಲ್ಲೆ ಕಾಗವಾಡಕ್ಕೆ ಹೊರಟಿದ್ದರು. ಮಾರ್ಗ ಮಧ್ಯೆ ದೇವರ ದರ್ಶನ ಪಡೆಯಲು ಯರಗಟ್ಟಿಯ ಯಲ್ಲಮ್ಮನ ಗುಡಿಗೆ ತೆರಳಿದ್ದರು ಎಂದು ತಿಳಿದುಬಂದಿದೆ.
ಶ್ರೀಕಾಂತ ಚೌರಿ ಧಾರವಾಡದ ಇನ್ಪೈರ್ ಇಂಡಿಯಾ ಹೆಸರಿನ ಕೋಚಿಂಗ್ ಸೆಂಟರ್‌ನ ಮಾಜಿ ನಿರ್ದೇಶಕ. ಕೋಚಿಂಗ್ ಸೆಂಟರ್‌ಗೆ ಪರೀಕ್ಷಾ ಸಿದ್ಧತೆಗೆ ಬರುವ ಅಭ್ಯರ್ಥಿಗಳಿಂದ ಹಣ ಪಡೆದು ಪಿಎಸ್‌ಐ ನೇಮಕಾತಿ ಪರೀಕ್ಷೆಯ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ.