ಅಂಬಾಗಿಲು: ಸೊಸೆಯ ವಿರುದ್ಧ ಅತ್ತೆಯ ದೂರು
ಉಡುಪಿ ಮೇ.18 (ಉಡುಪಿ ಟೈಮ್ಸ್ ವರದಿ): ತನ್ನ ಗಂಡನ ಮನೆಯವರು ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿದ್ದಾರೆ ಎಂದು ಅಂಬಾಗಿಲುವಿನ ಪೂರ್ಣಿಮಾ ಅವರು ಗಂಡ ಹಾಗೂ ಆತನ ಮನೆಯವರ ವಿರುದ್ಧ ಉಡುಪಿ ಮಹಿಳಾ ಠಾಣೆಯಲ್ಲಿ ದಾಖಲಿಸಿದ ಪ್ರಕರಣಕ್ಕೆ ವಿರುದ್ಧವಾಗಿ ಉಡುಪಿ ನಗರ ಠಾಣೆಯಲ್ಲಿ ಪೂಣಿಮಾರವರ ಪತಿಯ ತಾಯಿ ಪ್ರತಿದೂರು ದಾಖಲಿಸಿದ್ದಾರೆ.
ಈ ಬಗ್ಗೆ ಶಿವಳ್ಳಿ ಗ್ರಾಮದ ತಾಂಗದಗಡಿಯ ಗೋಪಿ ಎಂಬವರು ಪೊಲೀಸರಿಗೆ ದೂರು ನೀಡಿದ್ದು, ಮೇ.16 ರಂದು ಗೋಪಿ ಅವರು ಮನೆಯಲ್ಲಿ ಇದ್ದ ವೇಳೆ ಪೂರ್ಣಿಮ, ಸಂಧ್ಯಾ, ವಿಠಲದಾಸ ಎಂಬವರು ಮನೆಗೆ ಬಂದು ಗೋಪಿ ಹಾಗೂ ಅವರ ಮಗ ವೆಂಕಟರಾಜ್ (ಪೂರ್ಣಿಮಾ ಅವರ ಪತಿ) ರವರಿಗೆ ಹಲ್ಲೆ ಮಾಡಿ, ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.