ಪುಸ್ತಕ ಪ್ರೀತಿ ಬೆಳೆಸಿಕೊಳ್ಳದಿದ್ದರೆ ಸಾಹಿತ್ಯ ಕೃಷಿಗೆ ಹಿನ್ನಡೆ- ಡಾ.ತಲ್ಲೂರು

ಉಡುಪಿ: ಇಂದಿನ ಮೊಬೈಲ್ ಯುಗದಲ್ಲಿ ಪುಸ್ತಕ ಓದುವ ಹವ್ಯಾಸವನ್ನು ಜನ ಮರೆತು ಬಿಟ್ಟಿದ್ದಾರೆ. ಕನ್ನಡ ಸಾಹಿತ್ಯಲೋಕದಲ್ಲಿ ಅತ್ಯುತ್ತಮ ಕೃತಿಗಳು ಬಿಡುಗಡೆಗೊಂಡರೂ, ಪುಸ್ತಕ ಕೊಂಡು ಕೊಳ್ಳುವವರಿಲ್ಲ. ಹೀಗಾಗಿ ಸಾಹಿತ್ಯ ಕ್ಷೇತ್ರದ ಬೆಳೆವಣಿಗೆಗೆ ಪುಸ್ತಕ ಪ್ರೀತಿಯನ್ನು ಬೆಳೆಸಿಕೊಳ್ಳುವುದು ಅತೀ ಆವಶ್ಯಕವಾಗಿದೆ ಎಂದು ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.

ಅವರು ಬುಧವಾರ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಪರ್ಯಾಯ ಕೃಷ್ಣಾಪುರ ಮಠದ ಆಶ್ರಯದಲ್ಲಿ ಕಥಾಬಿಂದು ಪ್ರಕಾಶನದ ವತಿಯಿಂದ ನಡೆದ `ಸಾಹಿತ್ಯ ಸಂಭ್ರಮ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪುಸ್ತಕಗಳನ್ನು ಕೊಂಡು ಕೊಳ್ಳುವವರಿಲ್ಲದಿದ್ದರೆ, ಪುಸ್ತಕ ಪ್ರಕಾಶನಕ್ಕೆ ಸಾಹಿತಿಗಳು ಹಿಂದೇಟು ಹಾಕುವ ಅಪಾಯವಿದೆ. ಕೊರೊನಾ ಹೊಡೆತದಿಂದ ಪುಸ್ತಕ ಮಳಿಗೆಗಗಳು ಪುಸ್ತಕ ಕೊಂಡು ಕೊಳ್ಳುವವರಿಲ್ಲದೆ ಸೊರಗಿವೆ. ಅವರು ಹೊಸ ಪುಸ್ತಕಗಳೇ ಬೇಡ ಎನ್ನುತ್ತಿದ್ದಾರೆ. ಹೀಗಾದರೆ ಪುಸ್ತಕವನ್ನು ಪ್ರಕಟಿಸಿ, ಯಾರಿಗೆ ಕೊಡಬೇಕು ? ಈ ನಿಟ್ಟಿನಲ್ಲಿ ಸಭೆ, ಸಮಾರಂಭಗಳಲ್ಲಿ ಮೊಮೆಂಟೋಗಳ ಬದಲು ಪುಸ್ತಕಗಳನ್ನು ನೀಡುವಂತಾಗಬೇಕು.

ಮೊಬೈಲ್‌ನಲ್ಲಿ ಕಳೆದುಹೋಗಿರುವ ಪುಸ್ತಕ ಪ್ರಿಯರನ್ನು ಮತ್ತೆ ಓದಿನೆಡೆಗೆ ಸೆಳೆಯಲು ಸಾಹಿತಿಗಳು, ಪರಿಷತ್ತುಗಳು ಸೂಕ್ತ ಚಿಂತನೆ ನಡೆಸಬೇಕು ಎಂದು ಅವರು ಕರೆ ನೀಡಿದರು.ಕಾರ್ಯಕ್ರಮದಲ್ಲಿ ಕಥಾ ಬಿಂದು ಪ್ರಕಾಶನದ 25ನೆ ಕೃತಿ ಲೇಖಕ ಟಿ. ತ್ಯಾಗರಾಜು ಮೈಸೂರು ಅವರ ‘ಅಕ್ಷರ ಜೋಳಿಗೆ’ ಕೃತಿಯನ್ನು ಲೋಕಾರ್ಪಣೆಗೊಳಸಿಲಾಯಿತು. ಕಾರ್ಯಕ್ರಮದಲ್ಲಿ ಕಥಾಬಿಂದು ಪ್ರಕಾಶನದ ಮುಖ್ಯಸ್ಥ ಪಿ.ವಿ.ಪ್ರದೀಪ್ ಕುಮಾರ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಪಿಂಗಾರ ಸಾಹಿತ್ಯ ಬಳಗದ ರೇಮಂಡ್ ಡಿಕೂನಾ, ಲೇಖಕ ಶಬ್ಬೀರ್ ಉಳಿಯಾರು, ಗೋಪಾಲಕೃಷ್ಣ ಶಾಸ್ತಿç, ಕೃತಿಕಾರ ಟಿ. ತ್ಯಾಗರಾಜು ಮೈಸೂರು ಮತ್ತಿತರರು ಉಪಸ್ಥಿತರಿದ್ದರು.ದಿನವಿಡೀ ನಡೆದ ಕಾರ್ಯಕ್ರಮದಲ್ಲಿ ಕವಿ ಗೋಷ್ಠಿ, ಪುಸ್ತಕ ಬಿಡುಗಡೆ, ಗೀತ ಗಾಯನ ಹಾಗೂ ಸಾಧಕರಿಗೆ ಪ್ರಶಸ್ತಿ ಪುರಸ್ಕಾರ ನಡೆಯಿತು.

Leave a Reply

Your email address will not be published. Required fields are marked *

error: Content is protected !!