ಭೂಸುಧಾರಣೆ ಕಾಯ್ದೆಗೆ ಬದಲಾವಣೆ, ಹೊಸ ಕೃಷಿಕರಿಗೆ ಅವಕಾಶ: ಆರ್.ಅಶೋಕ್
ಉಡುಪಿ: ಭೂಸುಧಾರಣೆ ಕಾಯ್ದೆಯ 79 ಎಬಿ ರದ್ದತಿಯಿಂದ ಹೊಸ ಯುವ ಕೃಷಿಕರಿಗೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ವಿಪುಲ ಅವಕಾಶಗಳು ಸೃಷ್ಟಿಯಾಗಿವೆ. ಆ ಮೂಲಕ ಕೃಷಿಕರಲ್ಲದವರಿಂದ ಕೃಷಿ ಭೂಮಿ ಖರೀದಿಗೆ ಮುಕ್ತ ಅವಕಾಶಗಳು ಉಂಟಾಗಿವೆ. ಈ ಪ್ರಕ್ರಿಯೆ ಆತ್ಮನಿರ್ಭರ ಭಾರತದತ್ತ ದಿಟ್ಟ ಹೆಜ್ಜೆಯಾಗಿದೆ ಎಂದು ರಾಜ್ಯ ಕಂದಾಯ ಸಚಿವ ಆರ್ ಅಶೋಕ್ ಹೇಳಿದರು.
ಅವರು ಉಡುಪಿ ಜಿಲ್ಲಾ ಪ್ರಕೃತಿ ವಿಕೋಪ ವೀಕ್ಷಣೆಗೆ ಆಗಮಿಸಿದ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಬಿಜೆಪಿ ಕಚೇರಿಗೆ ಬೇಟಿ ನೀಡಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು.
ಬಿಜೆಪಿಯಲ್ಲಿ ಮಾತ್ರ ಕಾರ್ಯಕರ್ತರ ಸೇವೆಯನ್ನು ಗುರುತಿಸಿ ಅವಕಾಶಗಳನ್ನು ನೀಡುವ ಪದ್ದತಿ ಇದೆ. ವಿರೋಧ ಪಕ್ಷಗಳಲ್ಲಿ ಅದಿಕಾರವು ಕೇವಲ ಕೆಲವೇ ಕುಟುಂಬಗಳಿಗೆ ಸೀಮಿತವಾಗಿದೆ. ದೇಶದಲ್ಲೇ ಪ್ರಥಮ ಬಾರಿಗೆ ಉಡುಪಿ ನಗರ ಸಭೆ ಬಿಜೆಪಿ ನೇತೃತ್ವದಲ್ಲಿ ಅಧಿಕಾರದ ಚುಕ್ಕಾಣೆ ಹಿಡಿದ ಖ್ಯಾತಿಗೆ ಪಾತ್ರವಾಗಿದೆ. ಕೃಷಿ ಕ್ಷೇತ್ರದಲ್ಲಿ ಪ್ರಾಂತಿಕಾರಿ ಬದಲಾವಣೆ ತರುವ ಜೊತೆಗೆ ಇತರ ಅನೇಕ ಸೌಲಭ್ಯಗಳನ್ನು ಜನತೆಗೆ ತಲುಪಿಸಲು ಕಾಂಗ್ರೇಸ್ ಸರಕಾರಗಳು ಮಾಡಿರುವ ಕೆಲವೊಂದು ಕಾನೂನುಗಳ ರದ್ದತಿ ಅತ್ಯಗತ್ಯ. ವೃದ್ದಾಪ್ಯ ವೇತನವನ್ನು 60 ವರ್ಷ ತುಂಬಿದ ತಕ್ಷಣ ಯಾವುದೇ ಮದ್ಯವರ್ತಿಗಳಿಲ್ಲದೆ ಸಾಮೂಹಿಕವಾಗಿ ಅರ್ಜಿ ಸಲ್ಲಿಸಿ ಬ್ಯಾಂಕ್ ಖಾತೆಯ ಮೂಲಕ ಪಡೆಯುವ ಸೌಲಭ್ಯ ಒದಗಿಸುವ ಗುರಿ ಹೊಂದಲಾಗಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿ ಸಚಿವರನ್ನು ಶಾಲು ಹೊದಿಸಿ ಸನ್ಮಾನಿಸಿದರು. ಶಾಸಕ ಕೆ.ರಘುಪತಿ ಭಟ್, ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ. ಉದಯ ಕುಮಾರ್ ಶೆಟ್ಟಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮನೋಹರ್ ಎಸ್ ಕಲ್ಮಾಡಿ, ಬಿಜೆಪಿ ನಗರಾಧ್ಯಕ್ಷ ಮಹೇಶ್ ಠಾಕೂರ್, ಜಿಲ್ಲಾ, ಮೋರ್ಚಾ ಮತ್ತು ಮಂಡಲಗಳ ಪದಾಧಿಕಾರಿಗಳು, ನಗರಸಭಾ ಸದಸ್ಯರು ಉಪಸ್ಥಿತರಿದ್ದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.