ವಕೀಲರು ಸಲ್ಲಿಸಿರುವ ಅರ್ಜಿ ವಜಾ- 8 ಲಕ್ಷ ರೂ. ದಂಡ
ಹೊಸದಿಲ್ಲಿ, ಮೇ.18: ಸಂಚಾರ ದಟ್ಟಣೆ, ವಾಯುಮಾಲಿನ್ಯ ಮತ್ತು ಹೊಗೆ ಸೂಸುವಿಕೆ ನಿಯಮಗಳಿಗೆ ಸಂಬಂಧಿಸಿದಂತೆ ಇಬ್ಬರು ವಕೀಲರು ಸಲ್ಲಿಸಿರುವ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯವು ವಜಾಗೊಳಿಸಿ ವಕೀಲರಿಗೆ ಎಂಟು ಲಕ್ಷರೂ.ಗಳ ದಂಡವನ್ನು ವಿಧಿಸಿದೆ.
ಅರ್ಜಿ ಸಲ್ಲಿಕೆ ವಿಚಾರವಾಗಿ ವಕೀಲರನ್ನು ತರಾಟೆಗೆ ತೆಗೆದುಕೊಂಡಿರುವ ನ್ಯಾ.ಎಲ್.ನಾಗೇಶ್ವರ ರಾವ್ ನೇತೃತ್ವದ ಪೀಠವು ಇದು ಅಣಕು ನ್ಯಾಯಾಲಯ ಸ್ಪರ್ಧೆಯಲ್ಲ ಎಂದು ಕಟುವಾಗಿ ಹೇಳಿದೆ. ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ಆದೇಶ ಮತ್ತು ಇತರ ಪ್ರತಿಯೊಂದೂ ಆದೇಶವನ್ನು ನೀವು ನೋಡಿದ್ದೀರಿ, ಆದರೂ ನೀವು ಈ ಅರ್ಜಿಯನ್ನು ಸಲ್ಲಿಸಿದ್ದೀರಿ. ನಿಮಗೆ ಇದು ಖಚಿತವಿದೆಯೇ ಎಂದು ಪ್ರಶ್ನಿಸಿದ ಪೀಠವು, ‘ಸರ್ವೋಚ್ಚ ನ್ಯಾಯಾಲಯದಲ್ಲಿ ವಕಾಲತ್ ನಡೆಸುತ್ತಿರುವ ಇಬ್ಬರು ವಕೀಲರು ಈ ದುಸ್ಸಾಹಸಕ್ಕೆ ಇಳಿದಿದ್ದಾರೆ.
ಈ ಬಗ್ಗೆ ನಾವು ಅವರಿಗೆ ಎಚ್ಚರಿಕೆಯನ್ನು ನೀಡುತ್ತಿದ್ದೇವೆ. ಅರ್ಜಿದಾರರಿಗೆ ಎಂಟು ಲಕ್ಷ ರೂ.ಗಳ ಅನುಕರಣೀಯ ದಂಡವನ್ನು ವಿಧಿಸಲಾಗಿದೆ. ವಕೀಲರ ಯಾವುದೇ ರಿಟ್ ಅರ್ಜಿಯನ್ನು ರಿಜಿಸ್ಟ್ರಿಯು ಅಂಗೀಕರಿಸುವುದಿಲ್ಲ ’ಎಂದು ಹೇಳಿತು. ವಾಹನಗಳ ಮೇಲಿನ 10 ಮತ್ತು 15 ವರ್ಷಗಳ ನಿಯಮವು ಅನೂರ್ಜಿತ ಮತ್ತು ಕಾನೂನುಬಾಹಿರವಾಗಿದೆ ಎಂದು ಅರ್ಜಿಯು ವಾದಿಸಿತ್ತು.