ಅತೀ ಹೆಚ್ಚು ಬಸ್ ಅಪಘಾತಕ್ಕೆ 40-50 ವರ್ಷ ವಯಸ್ಸಿನ ಚಾಲಕರು ಕಾರಣ ವರದಿ
ಬೆಂಗಳೂರು ಮೇ.18 : ನಾಲ್ಕು ತಿಂಗಳ ಅವಧಿಯಲ್ಲಿ ಕೆಎಸ್‌ಆರ್‌ಟಿಸಿಯ 80 ಬಸ್ ಅಪಘಾತಗಳಲ್ಲಿ ಹೆಚ್ಚಿನವು 40ರಿಂದ 50 ವರ್ಷ ವಯಸ್ಸಿನ ಚಾಲಕ ರಿಂದ ಸಂಭವಿಸಿದ್ದು ಎಂದು ನಿಗಮ ತಿಳಿಸಿದೆ.
ಅಪಘಾತ ನಿಯಂತ್ರಿಸುವ ಸಂಬಂಧ ಸಮಾಲೋಚನೆ ಮತ್ತು ಜಾಗೃತಿ ಕಾರ್ಯಾಗಾರದಲ್ಲಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಸುಕುಮಾರ್ ಚಾಲನಾ ಸಿಬ್ಬಂದಿಗಳ ಜತೆ ಸಂವಾದ ನಡೆಸಿ, ನೌಕರರು ಎಚ್ಚರಿಕೆಯಿಂದ ಚಾಲನೆ ಮಾಡಬೇಕು ಎಂದು ಸಲಹೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಜನವರಿಯಿಂದ ಏಪ್ರಿಲ್ ನಡುವೆ 80 ಮಾರಣಾಂತಿಕ ಅಪಘಾತಗಳು ವರದಿಯಾಗಿವೆ. ಶೇ 39 ರಷ್ಟು ಅಪಘಾತಗಳು 40 ರಿಂದ 50 ವರ್ಷ ವಯಸ್ಸಿನ ಚಾಲಕರಿಂದಲೇ ಉಂಟಾಗಿವೆ. ಶೇ 23ರಷ್ಟು ಅಪಘಾತಗಳು 36 ರಿಂದ 40 ವರ್ಷ ವಯಸ್ಸಿನ ಚಾಲಕರಿಂದ ಉಂಟಾಗಿವೆ. ಸಾವು-ನೋವುಗಳ ಪ್ರಮಾಣವನ್ನು ಅವಲೋಕಿಸಿದಾಗ ಶೇ.44 ಅಪಘಾತಗಳು ದ್ವಿಚಕ್ರ ವಾಹನಗಳು ಮತ್ತು ಶೇ.19 ಅಪಘಾತಗಳು ಪಾದಚಾರಿಗಳು, ಶೇ.27 ರಷ್ಟು ಅಪಘಾತಗಳು ಮಧ್ಯಾಹ್ನದ ಅವಧಿಯಲ್ಲಿ ಸಂಭವಿಸಿವೆ ಎಂದು ಕೆಎಸ್‌ಆರ್‌ಟಿಸಿ ಅವಲೋಕಿಸಿದೆ ಎಂದು ತಿಳಿಸಿದ್ದಾರೆ.