ಉಡುಪಿ: ಲಕ್ಷಾಂತರ ರೂ ಬೆಲೆಬಾಳುವ ವಸ್ತು ವಾರೀಸುದಾರರಿಗೆ ಹಸ್ತಾಂತರಿಸಿದ ರಿಕ್ಷಾ ಚಾಲಕರು
ಉಡುಪಿ ಮೇ.17: ರಿಕ್ಷಾದಲ್ಲಿ ಮರೆತು ಹೋಗಿದ್ದ ನಗದು, ಚಿನ್ನಾಭರಣ, ದಾಖಲೆ ಪತ್ರಗಳಿದ್ದ ಬ್ಯಾಗ್‌ನ್ನು ವಾರಸುದಾರರಿಗೆ ಹಸ್ತಾಂತರಿಸುವ ಮೂಲಕ ನಗರ ರಿಕ್ಷಾ ಚಾಲಕ ನಝೀರ್ ಪ್ರಾಮಾಣಿಕತೆ ಮೆರೆದಿದ್ದಾರೆ.
ಮಧುಕರ್ ರಾವ್ ಎಂಬವರು ಸೂರತ್ ನಿಂದ ತಮ್ಮ ಸಂಬಂಧಿಕರ ಆರಕ್ಷತೆ ಕಾರ್ಯಕ್ರಮಕ್ಕಾಗಿ ಉಡುಪಿ ಶಾಮಿಲಿ ಹಾಲ್ ಗೆ ಇಂದು ಬಂದಿದ್ದು, ಕಾರ್ಯಕ್ರಮ ಮುಗಿಸಿಕೊಂಡು ಮಧ್ಯಾಹ್ನ 3 ಗಂಟೆಗೆ ಆಟೋ ರಿಕ್ಷಾವೊಂದರಲ್ಲಿ ತೆರಳಿದ್ದರು. ಈ ವೇಳೆ ಅವರು ತಮ್ಮ ಲಗೇಜ್‌ನ್ನು ರಿಕ್ಷಾದಲ್ಲಿಯೇ ಮರೆತು ಬಿಟ್ಟು ಹೋಗಿದ್ದರು. ಬಹಳ ಹೊತ್ತಿನ ಬಳಿಕ ನಗರದ ಹಾಜಿ ಅಬ್ದುಲ್ಲಾ ಆಟೋ ನಿಲ್ದಾಣದ ರಿಕ್ಷಾ ಚಾಲಕ ನಝೀರ್ ಅವರು ಆ ಲಾಗೇಜ್‌ನ್ನು ತನ್ನ ರಿಕ್ಷಾದಲ್ಲಿರುವುದು ಗಮನಿಸಿದರು. ಕೂಡಲೇ ಅವರು ಲಗೇಜ್ ನ್ನು ನಗರ ಠಾಣೆಗೆ ನೀಡಿದ್ದು, ಆ ಬ್ಯಾಗ್‌ನ್ನು ನಗರ ಪೊಲೀಸ್ ಠಾಣೆಯಲ್ಲಿ ಸಮಾಜ ಸೇವಕ ನಿತ್ಯಾನಂದ ಒಳಕಾಡು, ಬ್ರಿಜೇಜ್, ಪೊಲೀಸ್ ಉಪನಿರೀಕ್ಷಕ ವಾಸಪ್ಪ ನಾಯ್ಕ್ ಸಮಕ್ಷಮ ನಗರ ಠಾಣಾ ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್ ವಾರಸುದಾರರಿಗೆ ಹಸ್ತಾಂತರಿಸಿದರು.ಈ ಬ್ಯಾಗಿನಲ್ಲಿ ನಗದು, ಚಿನ್ನಾಭರಣ, ಬಟ್ಟೆ ಬರೆಗಳು ಹಾಗೂ ದಾಖಲೆ ಪತ್ರಗಳಿದ್ದವು. ಇದೀಗ ರಿಕ್ಷಾ ಚಾಲಕನ ಪ್ರಾಮಾಣಿಕತೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ಇನ್ನೊಂದು ಘಟನೆಯಲ್ಲಿ ಉಡುಪಿಯ ಜೋಡುಕಟ್ಟೆಯ ಆಟೋ ನಿಲ್ದಾಣದ ರಿಕ್ಷಾ ಚಾಲಕ ಅಶೋಕ್ ಅವರು ಇಂದ್ರಾಳಿ ರೈಲು ನಿಲ್ದಾಣದಿಂದ ಕೊರಂಗ್ರಪಾಡಿಗೆ ಪ್ರಯಾಣಿಕರನ್ನು ಬಿಟ್ಟಿದ್ದು,ಆ ಪ್ರಯಾಣಿಕರು ರಿಕ್ಷಾದಲ್ಲಿ ಮರೆತು ಬಿಟ್ಟ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಮತ್ತು ದಾಖಲೆ ಪತ್ರಗಳಿದ್ದ ಬ್ಯಾಗ್ ಸಿಕ್ಕಿತ್ತು. ಅದನ್ನು ರಿಕ್ಷಾ ಚಾಲಕರಾದ ಅಶೋಕ್ ಸ್ವತಃ ಪ್ರಯಾಣಿಕರ ಮನೆಗೆ ಹೋಗಿ ಹಿಂದುರುಗಿಸಿ ಮಾನವೀಯತೆ ಮರೆದಿದ್ದಾರೆ.