ಹೊರಟಿದ್ದು ಕೊಲ್ಲೂರಿಗೆ ದರ್ಶನ ಆಗಿದ್ದು ಗೋವಾದ ಬಿಕಿನಿ ಧಾರಿಗಳದ್ದು!
ಉಡುಪಿ: ಕೊಲ್ಲೂರು ದೇವಸ್ಥಾನ ದರ್ಶನಕ್ಕೆ ಹೊರಟಿದ್ದ ಯಾತ್ರಾರ್ಥಿಗಳನ್ನು ಬಸ್ ಚಾಲಕನ ಯಡವಟ್ಟಿನಿಂದ ಗೋವಾ ಬೀಚ್ ಗೆ ಕರೆದೊಯ್ದ ಘಟನೆ ನಡೆದಿದೆ.
ಮೇ 15ರ ಸಂಜೆ ತಿರುವನಂತಪುರದಿಂದ ಕೇರಳ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಕೊಲ್ಲೂರಿಗೆ ದೇವಳಕ್ಕೆ ಮೂಕಾಂಬಿಕೆಯ ದರ್ಶನಕ್ಕೆ ಹೊರಟಿತ್ತು. ಎರ್ನಾಕುಳಂ ವರೆಗೆ ಓರ್ವ ಚಾಲಕನಿದ್ದು, ಅಲ್ಲಿಂದ ಇನ್ನೋರ್ವ ಚಾಲಕ ಬಸ್ ಅನ್ನು ಚಲಾಯಿಸಿದ್ದ. ಬಸ್ ಮಂಗಳೂರು ಮೂಲಕ ಕುಂದಾಪುರದಿಂದ ಕೊಲ್ಲೂರು ಕಡೆ ತಿರುಗುವುದು ಬಿಟ್ಟು ಚಾಲಕ ನೇರವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲೇ ಬಸ್ಸನ್ನು ಚಲಾಯಿಸಿದ್ದಾನೆ. ಸೋಮವಾರ ಬೆಳಗ್ಗೆ ಬಸ್‌ನಲ್ಲಿದ್ದವರು ಎಚ್ಚೆತ್ತು ನೋಡಿದಾಗ ಬಸ್ ಸಮುದ್ರ ಕಿನಾರೆಯಲ್ಲಿತ್ತು. ಅರೆನಗ್ನ ವಿದೇಶೀಯರು ಓಡಾಡುತ್ತಿದ್ದರು. ಮೂಕಾಂಬಿಕೆಯ ದರ್ಶನಕ್ಕೆಂದು ಹೊರಟ ತಾವು ಗೋವಾಗೆ ತಲುಪಿದ್ದೇವೆ ಎಂಬುದು ತಿಳಿಯಿತು. ಚಾಲಕನೊಂದಿಗೆ ಪ್ರಯಾಣಿಕರು ವಾಗ್ವಾದ ನಡೆಸಿದರು. ಗೂಗಲ್ ಮ್ಯಾಪ್ ದಾರಿ ತಪ್ಪಿಸಿದೆ ಎಂದು ಹೇಳಿ ಚಾಲಕ ಪಾರಾಗಲು ಯತ್ನಿಸಿದ. ಬಳಿಕ ಪ್ರಯಾಣಿಕರನ್ನು ಕೊಲ್ಲೂರಿಗೆ ಕರೆದೊಯ್ದಿದ್ದಾನೆ. ದೇವರ ದರ್ಶನ ಪಡೆದ ಪ್ರಯಾಣಿಕರಿಗೆ ಉಚಿತವಾಗಿ ಗೋವಾ ತಿರುಗಿದಂತಾಯಿತು ಎಂದು ಸಂತೋಷ ಪಟ್ಟುಕೊಂಡಿದ್ದಾರೆ ಯಾತ್ರಾರ್ಥಿಗಳು.