ಮಂಗಳೂರು:ಭಾರೀ ಮಳೆಯ ಮುನ್ಸೂಚನೆ- ಹೊಸ ಕಟ್ಟಡ ನಿರ್ಮಾಣ ಕಾಮಗಾರಿ ನಡೆಸದಂತೆ ಎಚ್ಚರಿಕೆ
ಮಂಗಳೂರು : ನಗರದಲ್ಲಿ ಮೇ 17 ರಿಂದ 19ರವರೆಗೆ ಭಾರೀ ಮಳೆಯಾಗುವ ಸಂಭವವಿದೆ ಮತ್ತು ಜೂನ್ ತಿಂಗಳಾರಂಭದಲ್ಲಿ ಮುಂಗಾರು ಮಳೆ ಆರಂಭವಾಗಲಿರುವುದರಿಂದ ಪಾಲಿಕೆ ವ್ಯಾಪ್ತಿಯಲ್ಲಿ ಹೊಸತಾಗಿ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ನಡೆಸಬಾರದು ಎಂದು ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ತಿಳಿಸಿದ್ದಾರೆ.
ಗುಡ್ಡ ಅಗೆದು ನಿವೇಶನ ಸಮತಟ್ಟುಗೊಳಿಸುವ ಕಾರ್ಯದಿಂದ ಗುಡ್ಡ ಕುಸಿದು ತೊಂದರೆ ಆಗುವ ಸಂಭವ ಇರುವುದರಿಂದ ಗುಡ್ಡವನ್ನು ಅಗೆದು ನಿವೇಶನವನ್ನು ಸಮತಟ್ಟುಗೊಳಿಸಿ ಮಣ್ಣು ಸಾಗಾಟ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈಗಾಗಲೇ ಆರಂಭಿಸಿರುವ ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ಅಕ್ಕಪಕ್ಕದ ನಿವೇಶನಕ್ಕೆ ಹಾನಿಯಾಗದ ಹಾಗೆ ಎಚ್ಚರಿಕೆ ವಹಿಸುವುದು ಮತ್ತು ತಗ್ಗು ಪ್ರದೇಶವಿರುವಲ್ಲಿ ಯಾವುದೇ ಅನಾಹುತವಾಗದ ಹಾಗೆ ತಡೆಗೋಡೆ ನಿರ್ಮಿಸಿ ಸೂಕ್ತ ರೀತಿಯಲ್ಲಿ ಭದ್ರಪಡಿಸಬೇಕು. ತಪ್ಪಿದ್ದಲ್ಲಿ ಕೆಎಂಸಿ ಕಾಯ್ದೆಯಂತೆ ಸೂಕ್ತ ಕಾನೂನು ಕ್ರಮ ಜರಗಿಸಲಾಗುವುದು ಎಂದು ಪಾಲಿಕೆ ಆಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.