ಲಯನ್ಸ್ ಕ್ಲಬ್ ಬಂಟಕಲ್ -ಬಿ.ಸಿ.ರೋಡ್: ಗುರು ಶಿಷ್ಯರ ಪದಗ್ರಹಣ
ಶಿರ್ವ (ಉಡುಪಿ ಟೈಮ್ಸ್ ವರದಿ): ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕಿಯಾಗಿ ನೂರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿತ ಮಾಡುವಲ್ಲಿ ಯಶಸ್ವಿಯಾಗಿರುವ ಶಿಕ್ಷಕಿಯೋರ್ವರು, ಪ್ರಮುಖ ಸಮಾಜ ಸೇವಾ ಸಂಸ್ಥೆ ಲಯನ್ಸ್ ಕ್ಲಬ್ ಮುಖಾಂತರ ಸಮಾಜಕ್ಕೆ ಸೇವೆ ಸಲ್ಲಿಸಲು ಸಿದ್ಧರಾಗಿದ್ದು, ಅದರಲ್ಲೂ ತಾನೇ ಬೆಳೆಸಿದ ವಿದ್ಯಾರ್ಥಿ, ಅಧ್ಯಕ್ಷರಾಗಿರುವ ಸಂಸ್ಥೆಯಲ್ಲಿ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದು, ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದಕ್ಕೆ ಸಾಕ್ಷಿಯಾದದ್ದು ಲಯನ್ಸ್ ಕ್ಲಬ್ ಬಂಟಕಲ್- ಬಿ.ಸಿ.ರೋಡ್.
ಲಯನ್ಸ್ ಕ್ಲಬ್ ಬಂಟಕಲ್ಲು – ಬಿ.ಸಿ. ರೋಡ್ ಇದರ ಪದಗ್ರಹಣ ಕಾರ್ಯಕ್ರಮವು ನಿಶಾ ಕೆಟರರ್ಸ್ ಮಾಲಕರಾದ ಇಗ್ನೇಶಿಯಸ್ ಡಿ’ಸೋಜರವರ ಮನೆಯಲ್ಲಿ ಸರಕಾರದ ನಿಯಮಗಳ ಅನುಸಾರ ಸರಳ ರೀತಿಯಲ್ಲಿ ನೆರವೇರಿತು. 317C ಲಯನ್ ಜಿಲ್ಲಾ ಗವರ್ನರ್ ಲ.ಎನ್. ಎಮ್ ಹೆಗ್ಡೆ, ಬಂಟಕಲ್ಲು ಬಿ.ಸಿ.ರೋಡ್ ಕ್ಲಬ್ಬಿನ ಕಾರ್ಯಕ್ರಮಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ನೂತನ ಸಾಲಿನ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಲು ಮನವಿ ಮಾಡಿದರು.
ಪದಗ್ರಹಣ ಅಧಿಕಾರಿಯಾಗಿ ಅಗಮಿಸಿದ ಲಿಯೋ ಕ್ಲಬ್ ನ ಸಂಯೋಜಕ ಲ. ಜೆರಾಲ್ಡ್ ಫೆರ್ನಾಂಡಿಸ್ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ನಡೆಸಿದರು. ಲಯನ್ ಮುಂದಾಳುಗಳಾದ, ಲ. ಸ್ಟೀಫನ್ ಕಸ್ತಲಿನೊ, ಲ.ಲಾನ್ಸಿ ಕೊರ್ಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸರಕಾರದ ನಿಯಮಗಳ ಪಾಲನೆಯೊಂದಿಗೆ ಕ್ಲಬ್ ಸದಸ್ಯರ ಉಪಸ್ಥಿತಿಯಲ್ಲಿ ಸರಳವಾಗಿ ಕಾರ್ಯಕ್ರಮ ನೆರವೇರಿತು.
ನಿರ್ಗಮನ ಅಧ್ಯಕ್ಷ ಲ.ಕೆ.ಅರ್. ಪಾಟ್ಕರ್ ಸ್ವಾಗತಿಸಿ, ತನ್ನ ಅವಧಿಯಲ್ಲಿ ಸಹಕರಿಸಿದವರಿಗೆ ಕೃತಜ್ಞತೆ ಅರ್ಪಿಸಿದರು. ನೂತನ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕಾರಿಸಿದ ಬಳಿಕ ಮಾತಾನಾಡಿದ ಲ. ವಿಜಯ್ ಧೀರಜ್, ಪ್ರಸುತ್ತ ಸಾಲಿನ ಕಾರ್ಯಕ್ರಮಗಳಿಗೆ ಸರ್ವರ ಸಹಕಾರಯಾಚಿಸಿದರು. ತನ್ನ ವಿದ್ಯಾರ್ಥಿ ಜೀವನದಲ್ಲಿ ತನಗೆ ಬೋಧನೆ ಮಾಡಿದ ಶಿಕ್ಷಕಿ, ನನ್ನ ಅಧ್ಯಕ್ಷೀಯ ಅವಧಿಯಲ್ಲಿ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದು, ನನ್ನನ್ನು ಇನ್ನಷ್ಟು ಹುರಿದುಂಬಿಸುವಂತೆ ಮಾಡಿದೆ. ತಪ್ಪು ಮಾಡಿದಾಗ ತಿದ್ದಿ ಬೆಳೆಸಿದ ಶಿಕ್ಷಕಿ, ಪ್ರಸ್ತುತ ಸಮಾಜದಲ್ಲಿ ಪ್ರಮುಖ ಹುದ್ದೆಗಳನ್ನು ಜೊತೆಯಾಗಿ ಸ್ವೀಕರಿಸಿದ್ದು ತೃಪ್ತಿ ತಂದಿದೆ. ಸಮಾಜಕ್ಕೆ ಏನಾದರೂ ಉತ್ತಮ ಕೊಡುಗೆಯನ್ನು ಗುರುವಿನೊಂದಿಗೆ ಮಾಡುತ್ತೇನೆ ಎಂದು ನೂತನ ಅಧ್ಯಕ್ಷರು ತಿಳಿಸಿದರು.
ಇದೇ ಸಂದರ್ಭದಲ್ಲಿ ನೂತನ ಲಿಯೊ ಕ್ಲಬ್ಬಿನ ಸ್ಥಾಪನೆ ಮಾಡಲಾಯಿತು. ಸ್ಥಾಪಕ ಅಧ್ಯಕ್ಷರಾಗಿ ಲೊಯಲ್ ಡಿಸೋಜ, ಕಾರ್ಯದರ್ಶಿ ಗ್ಲೆನ್ ಪಿಂಟೋ ಮತ್ತು ಕೋಶಾಧಿಕಾರಿಯಾಗಿ ರೋನ್ ಡಿಸೋಜ ಪ್ರಮಾಣ ವಚನ ಸ್ವೀಕರಿಸಿದರು.
ಸಭಾ ಕಾರ್ಯಕ್ರಮದಲ್ಲಿ ಉಡುಪಿಯ ಪ್ರಸಾದ್ ನೇತ್ರಾಲಯಕ್ಕೆ ಕಣ್ಣನ್ನು ದಾನ ಮಾಡುವಲ್ಲಿ ಒಪ್ಪಂದ ಮಾಡಿಕೊಂಡಿರುವ 10 ಸದಸ್ಯರನ್ನು ಗೌರವಿಸಿ, ಸರ್ಟಿಫಿಕೇಟ್ ನೀಡಲಾಯಿತು
ನೂತನ ಕಾರ್ಯದರ್ಶಿ ಲ. ಅರುಂಧತಿ ಪ್ರಭು ಧನ್ಯವಾದ ಸಮರ್ಪಿಸಿದರೆ, ಲ. ಅನಿತಾ ಮತಾಯಸ್ ಕಾರ್ಯಕ್ರಮ ನಿರೂಪಿಸಿದರು.