ಮಣಿಪಾಲ ಕಾರು ಚಾಲಕನ ಸುಲಿಗೆ ಪ್ರಕರಣ: ಮಂಗಳೂರಿನ ನಾಲ್ವರ ಬಂಧನ

ಮಣಿಪಾಲ ಮೇ.16: ಇಲ್ಲಿನ ಕಾರು ಚಾಲಕ ಶ್ರೀಧರ ಭಕ್ತ ಅವರನ್ನು ಕಾರು ಬಾಡಿಗೆ ಇದೆ ಎಂದು ಮಣಿಪಾಲದಿಂದ ಕರೆದೊಯ್ದು ಸುಲಿಗೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು ಉಳ್ಳಾಲ ನಿವಾಸಿ ಚರಣ್‌ (35), ಶಿರ್ವ ನಿವಾಸ ಮೊಹಮ್ಮದ್‌ ಅಜರುದ್ದೀನ್‌ (39), ಬಂಟ್ವಾಳ ನಿವಾಸಿ ಶರತ್‌ ಪೂಜಾರಿ (36) ಮತ್ತು ಮಂಗಳೂರು ನಿವಾಸಿ ಜಯಪ್ರಸಾದ್‌ (43) ಬಂಧಿತ ಆರೋಪಿಗಳು.

ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿ‌ ಶ್ರೀಧರ ಭಕ್ತ ಅವರು ನೀಡಿದ ದೂರಿನ ಆಧಾರದ ಮೇಲೆ ಕಾರ್ಯಪ್ರವೃತ್ತ ರಾದ ಮಣಿಪಾಲ ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಉಡುಪಿ ಪೊಲೀಸ್ ಅಧೀಕ್ಷಕರಾದ ವಿಷ್ಣುವರ್ಧನ್ ಐ ಪಿ ಸ್ ರವರು ಹಾಗೂ ಹೆಚ್ಚುವರಿ ಎಸ್ ಪಿ ಸಿದ್ದಲಿಂಗಪ್ಪನವರ ಮಾರ್ಗದರ್ಶನ ದಲ್ಲಿ ಉಡುಪಿ ಉಪವಿಭಾಗದ ಡಿವೈಎಸ್ಪಿ ಸುಧಾಕರ ನಾಯಕ್‌ ನೇತೃತ್ವದಲ್ಲಿ ಮಣಿಪಾಲ ಪೊಲೀಸ್‌ ನಿರೀಕ್ಷಕರಾದ ಮಂಜುನಾಥ್‌, ಉಪನಿರೀಕ್ಷಕರಾದ ರಾಜಶೇಖರ್‌ ವಂದಲಿ, ಸಿಬಂದಿಗಳಾದ ಶೈಲೇಶ್‌, ನಾಗೇಶ್‌ ನಾಯ್ಕ್‌, ಪ್ರಸನ್ನ, ಇಮ್ರಾನ್‌, ಪ್ರಸಾದ್‌ ಬಂಧನ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಘಟನೆ ವಿವರ: 80 ಬಡಗಬೆಟ್ಟುವಿನ ಶಾಂತಿನಗರದ ಶ್ರೀಧರ ಭಕ್ತ(61) ಎಂಬವರು ಮಣಿಪಾಲ ಟೈಗರ್ ಸರ್ಕಲ್ ಬಳಿ ಎ.27ರಂದು ಸಂಜೆ ತನ್ನ ಕಾರನ್ನು ಬಾಡಿಗೆಗೆ ನಿಲ್ಲಿಸಿದ್ದು, ಸುಮಾರು 35ರಿಂದ 45 ವರ್ಷ ಪ್ರಾಯದ ತುಳು ಮಾತನಾಡುವ ನಾಲ್ಕು ಮಂದಿ ಬಂದು, ಕಾರವಾರಕ್ಕೆ ಹೋಗಲು ಕಾರನ್ನು ಬಾಡಿಗೆ ಗೊತ್ತು ಮಾಡಿ ಕರೆದುಕೊಂಡು ಹೋಗಿದ್ದರು. ರಾತ್ರಿ 8.40 ಗಂಟೆಗೆ ಅಂಕೋಲ ರೈಲ್ವೆ ನಿಲ್ದಾಣದ ಸಮೀಪ ಕಾರನ್ನು ಆರೋಪಿಗಳು ನಿಲ್ಲಿಸಲು ಹೇಳಿ, ಹಿಂಬದಿಯಲ್ಲಿದ್ದ ವ್ಯಕ್ತಿಯು ಶ್ರೀಧರ ಭಕ್ತರ ಕುತ್ತಿಗೆಯನ್ನು ಒತ್ತಿ ಹಿಡಿದು, ಉಳಿದ ಮೂವರು ಅವರನ್ನು ಚಾಲಕ ಸೀಟಿನಿಂದ ಹಿಂದಿನ ಸೀಟಿಗೆ ಎಳೆದು ಕುಳ್ಳಿರಿಸಿದರು. ನಂತರ ಚೂರಿ ತೋರಿಸಿ, ಶ್ರೀಧರ ಭಕ್ತ ಪರ್ಸ್‌ನಲ್ಲಿದ್ದ 3000ರೂ. ನಗದು ಹಾಗೂ ಕೈಯಲ್ಲಿದ್ದ ವಾಚ್ ತೆಗೆದುಕೊಂಡರು. ಬಳಿಕ ಕಾರಿನಲ್ಲಿದ್ದ ಒಬ್ಬ ವ್ಯಕ್ತಿ ಕಾರನ್ನು ಚಲಾಯಿಸಿಕೊಂಡು ರಾತ್ರಿ 11.30ರ ಸುಮಾರಿಗೆ ಕುಂದಾಪುರದ ಆನೆಗುಡ್ಡೆಗೆ ಕರೆದುಕೊಂಡು ಬಂದಿದ್ದು, ಎಟಿಎಂ ಬಳಿ ಕಾರನ್ನು ನಿಲ್ಲಿಸಿ ಹಣ ತೆಗೆದು ತರುವಂತೆ ಶ್ರೀಧರ ಭಕ್ತನಿಗೆ ಹೇಳಿದರು. ಕಾರಿನಿಂದ ಇಳಿದು ಎ.ಟಿ.ಎಂ ನ ಒಳಗೆ ಹೋದ ಶ್ರೀಧರ್ ಭಕ್ತ, ಬಳಿಕ ಹೊರಗೆ ಬಂದಿದ್ದು, ಈ ವೇಳೆ ಅವರು ಸ್ಥಳದಿಂದ ಓಡಿ ಹೋಗಿ ಪರಾರಿಯಾದ ಕುರಿತು ಶ್ರೀಧರ ಭಕ್ತ ಅವರು ಮಣಿಪಾಲ ಠಾಣೆಯಲ್ಲಿ ದೂರು ನೀಡಿದ್ದರು.

Leave a Reply

Your email address will not be published. Required fields are marked *

error: Content is protected !!