ವಿವಾಹ ವಿಚ್ಛೇದನ ಡಿಕ್ರಿ ನಕಲಿ ಪ್ರಕರಣ: ವಕೀಲ ಹಾಗೂ ಗುಮಾಸ್ತನ ವಿರುದ್ಧ ಸಿಐಡಿ ದೋಷಾರೋಪಣ ಪಟ್ಟಿ
ಮಂಗಳೂರು ಮೇ.16: ಎಂಟು ವರ್ಷಗಳ ಹಿಂದೆ ನಡೆದಿದ್ದ ಮಂಗಳೂರಿನ ನ್ಯಾಯಾಲಯದ ವಿವಾಹ ವಿಚ್ಛೇದನ ಡಿಕ್ರಿಯನ್ನು ಫೋರ್ಜರಿಯಾಗಿ ಸೃಷ್ಟಿಸಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ವಿರುದ್ಧ ಸಿಐಡಿ ದೋಷಾರೋಪಣ ಪಟ್ಟಿ ಸಲ್ಲಿಸಿದೆ.
ಈ ಬಗ್ಗೆ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಕರ್ನಾಟಕ ಹೈಕೋರ್ಟ್ ಆದೇಶದ ಪ್ರಕಾರ ಸಿಐಡಿ ತನಿಖೆ ನಡೆಸಿದ್ದು, ನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾರೋಪಣೆ ಪಟ್ಟಿಯಲ್ಲಿ ಮಂಗಳೂರಿನ ವಕೀಲರೊಬ್ಬರು ಹಾಗೂ ಅವರ ಗುಮಾಸ್ತರನ್ನು ಆರೋಪಿಗಳೆಂದು ಹೆಸರಿಸಲಾಗಿದೆ.
ಮಂಗಳೂರಿನ ನಿವಾಸಿಯೊಬ್ಬರು ತಾನು ಪ್ರೀತಿಸುತ್ತಿದ್ದ ಯುವತಿಯ ಜೊತೆ ಮದುವೆಯಾಗುವ ಸಲುವಾಗಿ ತನ್ನ ಮೊದಲ ಪತ್ನಿಗೆ ವಿಚ್ಛೇದನ ನೀಡಲು ಮಂಗಳೂರಿನ ವಕೀಲರೊಬ್ಬರನ್ನು ಸಂಪರ್ಕಿಸಿದ್ದರು. ಆ ವಕೀಲರು 2005ರ ಜುಲೈ ತಿಂಗಳಲ್ಲಿ ನ್ಯಾಯಾಲಯದಿಂದ ವಿವಾಹ ವಿಚ್ಛೇದನ ಆದೇಶ ಆಗಿದೆ ಎಂದು ಸುಳ್ಳು ದಾಖಲೆ ಸೃಷ್ಟಿಸಿ ನ್ಯಾಯಾಲಯದ ಡಿಕ್ರಿ ಎಂದು ಆ ವ್ಯಕ್ತಿಗೆ ಕೊಟ್ಟಿದ್ದರು.
ಆ ದಾಖಲೆಯನ್ನು ಪಡೆದ ವ್ಯಕ್ತಿ ಬಳಿಕ ಮೃತಪಟ್ಟಿದ್ದರು. ಇದಾದ ನಂತರ ಮೃತರ ಹೆಸರಿನಲ್ಲಿದ್ದ ಬಾಂಡ್, ನಿರಖು ಠೇವಣಿ ಹಂಚಿಕೆ ಹಂಚಿಕೆ ವಿಚಾರದಲ್ಲಿ ಮೊದಲ ಪತ್ನಿ ಮತ್ತು ಎರಡನೆಯ ಪತ್ನಿ ನಡುವೆ ತಕರಾರು ಉಂಟಾಯಿತು. ಪ್ರಕರಣ ಕೋರ್ಟ್ ಮೆಟ್ಟಿಲೇರಿತು. ಈ ಸಂದರ್ಭದಲ್ಲಿ ಎರಡನೇ ಪತ್ನಿ, ವಿಚ್ಚೇದನದ ಡಿಕ್ರಿ ದಾಖಲೆಯನ್ನು ನೈಜ ದಾಖಲೆ ಎಂದು ನಂಬಿ 2009ರಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು.
ಈ ಡಿಕ್ರಿಯನ್ನು ನ್ಯಾಯಾಲಯ ಪರಿಶೀಲಿಸಿದಾಗ, ಇದೊಂದು ಖೊಟ್ಟಿ ದಾಖಲೆ, ಇಂತಹ ಡಿಕ್ಕಿ ನ್ಯಾಯಾಲಯ ಹೊರಡಿಸಿಲ್ಲ ಎಂದು ತಿಳಿದುಬಂತು. ಇದರಿಂದ ಅವಕ್ಕೀಡಾದ, ವ್ಯಾಜ್ಯದಲ್ಲಿ ಎರಡನೇ ಪತ್ನಿ ಪರ ವಾದಿಸುವ ವಕೀಲರು ಪ್ರಕರಣದಿಂದ ತಕ್ಷಣ ಹಿಂದೆ ಸರಿದರು. ಇದೀಗ ಪ್ರಕರಣಕ್ಕೆ ಸಂಬಂಧಿಸಿ ಫೋರ್ಜರಿ ಡಿಕ್ರಿ ಸೃಷ್ಟಿಸಿದ ಮಂಗಳೂರಿನ ವಕೀಲರು ಹಾಗೂ ಅವರ ಗುಮಾಸ್ತರ ವಿರುದ್ಧ CID ಹೆಚ್ಚುವರಿ ದೋಷಾರೋಪಣ ಪಟ್ಟಿ ಸಲ್ಲಿಸಿದೆ. ಈ ಪ್ರಕರಣದಲ್ಲಿ ಮಂಗಳೂರು ಉತ್ತರ ಠಾಣೆ ಪೊಲೀಸರು ತನಿಖೆ ನಡೆಸಿ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು. ಸಿಸಿಬಿ ಮುಂದಿನ ತನಿಖೆ ನಡೆಸಿತ್ತು. ಇದಾದ ನಂತರ ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶದಂತೆ CID ಮುಂದಿನ ತನಿಖೆ ನಡೆಸಿತ್ತು.