ಮೇ.20- ಪರಿಶಿಷ್ಟ ಪಂಗಡಗಳ ಮೀಸಲಾತಿ ಶೇ.7.5 ರಷ್ಟು ಹೆಚ್ಚಿಸಲು ಆಗ್ರಹಿಸಿ ಪ್ರತಿಭಟನೆ
ಉಡುಪಿ ಮೇ.16(ಉಡುಪಿ ಟೈಮ್ಸ್ ವರದಿ): ಪರಿಶಿಷ್ಟ ಪಂಗಡಗಳ ಜನಸಂಖ್ಯೆಗನುಗುಣವಾಗಿ ಮೀಸಲಾತಿ ಪ್ರಮಾಣವನ್ನು ಶೇಕಡಾ 7.5 ರಷ್ಟು ಹೆಚ್ಚಿಸಬೇಕು ಎಂದು ಆಗ್ರಹಿಸಿ ಮೇ.20 ರಂದು ಉಡುಪಿ ಜಿಲ್ಲಾ ಕರ್ನಾಟಕ ರಾಜ್ಯ ಸ್ವಾಭಿಮಾನಿ ಪರಿಶಿಷ್ಠ ಪಂಗಡಗಳ ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾ ಸಮಿತಿ ವತಿಯಿಂದ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಯವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು. ಈ ಮನವಿ ಬಗ್ಗೆ ಸರಕಾರ ಸಕಾರಾತ್ಮಕ ತೀರ್ಮಾನ ತೆಗೆದುಕೊಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿಗಳ ಕಛೇರಿ ಎದುರು ಅಮರಣಾಂತ ಸತ್ಯಾಗ್ರಹ ಮಾಡುವುದಾಗಿ ಪರಿಶಿಷ್ಟ ಪಂಗಡದ ಮರಾಠಿ ಸಂಘದ ಅಧ್ಯಕ್ಷ ಅನಂತ ನಾಯ್ಕ ತಿಳಿಸಿದ್ದಾರೆ.
ಈ ಬಗ್ಗೆ ಇಂದು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, 1958ರಲ್ಲಿ 1,92,096 ರಷ್ಟಿದ್ದ ಜನಸಂಖ್ಯೆಗೆ ನಿಗದಿಯಾಗಿದ ಮೀಸಲಾತಿ ಶೇ. 3ರ ಪ್ರಮಾಣ ಇಂದು ಪರಿಶಿಷ್ಟ ಪಂಗಡದ ಜನಸಂಖ್ಯೆ 42,48,987 ರಷ್ಟು ಹೆಚ್ಚಿದ್ದರೂ ಕೂಡ ಅಷ್ಟೇ ಇದೆ. ಆದ್ದರಿಂದ ಪರಿಶಿಷ್ಟ ಪಂಗಡಗಳ ಜನಸಂಖ್ಯೆಗನು ಗುಣವಾಗಿ ಮೀಸಲಾತಿ ಪ್ರಮಾಣ ಶೇಕಡಾ 7.5 ರಷ್ಟು ಹೆಚ್ಚಿಸುವಂತೆ ಸರಕಾರವನ್ನು ಆಗ್ರಹಿಸಿ, ಮೇ.20 ರಂದು ಸುಮಾರು 300 ಮಂದಿ ಪರಿಶಿಷ್ಟ ಪಂಗಡದ ಸಮುದಾಯದವರು ಸೇರಿ, ಮಣಿಪಾಲ ಟೈಗರ್ ಸರ್ಕಲ್‍ನಿಂದ ಮೆರವಣಿಗೆಯಲ್ಲಿ ಸಾಗಿ ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು.
ಈ ಸಂಬಂಧ ಸರ್ಕಾರ ಸಕಾರಾತ್ಮಕ ತೀರ್ಮಾನ ತೆಗೆದುಕೊಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿಗಳ ಕಛೇರಿ ಎದುರು ಅಮರಣಾಂತ ಸತ್ಯಾಗ್ರಹ ಮಾಡುವುದಾಗಿ ತಿಳಿಸಿದರು. ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯಕ್ಕೆ ಭಾರತ ಸಂವಿಧಾನ ಅನುಚ್ಛೇಧ 342 ರಂತೆ ಹೊರಡಿಸಲಾದ ಅಧಿಸೂಚನೆಗಳಲ್ಲಿ ಪರಿಶಿಷ್ಟ ಪಂಗಡಗಳ ಪಟ್ಟಿಯಲ್ಲಿ ಒಟ್ಟು 50 ಬುಡಕಟ್ಟುಗಳನ್ನು ಗುರುತಿಸಲಾಗಿರುತ್ತದೆ. 1958 ರಲ್ಲಿ ಪರಿಶಿಷ್ಟ ಪಂಗಡಕ್ಕೆ ಶೇಕಡಾ 3 ಮೀಸಲಾತಿ ಪ್ರಮಾಣ ನಿಗದಿಯಾಗಿರುತ್ತದೆ. ತದನಂತರ 1961 ಜನಗಣತಿಯ ಆಧಾರದಲ್ಲಿ ಇದ್ದಂತಹ ಜನಸಂಖ್ಯೆಗೆ ಅನುಗುಣವಾಗಿದ್ದ ಮೀಸಲಾತಿ ಪ್ರಮಾಣವನ್ನು ಪ್ರಸ್ತುತ 2011 ರ ಜನಗಣತಿಯ ಪ್ರಕಾರ ಇರುವ ಜನಸಂಖ್ಯೆಗೆ ಸರಿಯಾಗಿ ಪರಿಷ್ಕರಿಸಿ ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಪ್ರಮಾಣವನ್ನು ಕನಿಷ್ಟ ಶೇಕಡಾ 7.5 ಕ್ಕೆ ಏರಿಸುವಂತೆ ಸರ್ಕಾರವನ್ನು ಒತ್ತಾಯಿಸುವಲ್ಲಿ ಈಗಾಗಲೇ ರಾಜಧಾನಿಯಲ್ಲಿ ಹೋರಾಟ ಸಕ್ರಿಯವಾಗಿದೆ. ಅದರಂತೆ ಉಡುಪಿ ಜಿಲ್ಲೆಯಲ್ಲಿಯೂ ಕೂಡ ಈ ಬಗ್ಗೆ ಹೋರಾಟ ನಡೆಸುವ ಸಲುವಾಗಿ ಪರಿಶಿಷ್ಟ ಪಂಗಡ ಮೀಸಲಾತಿ ಹೆಚ್ಚಳ ಕ್ರಿಯಾ ಸಮಿತಿಯನ್ನು ರಚಿಸಲಾಯಿತು.
ಮೇ.3 ರಂದು ಉಡುಪಿ ಜಿಲ್ಲೆಯ ಪರಿಶಿಷ್ಟ ಪಂಗಡದ ಕೊರಗ ಸಮುದಾಯದ ಮುಖಂಡ ವಿ.ಗಣೇಶ್ ಕೊರಗ ಇವರ ನೇತೃತ್ವದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಮೀಸಲಾತಿ ಹೆಚ್ಚಳ ಹೋರಾಟದ ಬಗ್ಗೆ ಸಮಗ್ರವಾಗಿ ಚರ್ಚಿಸಲಾಗಿದ್ದು, ಈ ಸಭೆಯಲ್ಲಿ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಹಾಗೂ ನಿರುದ್ಯೋಗಿಗಳಿಗೆ, ಹಾಲಿ ಉದ್ಯೋಗಿಗಳಿಗೆ ಪ್ರಾತಿನಿದ್ಯತೆ ಸಂಬಂಧವಾಗಿ ಇದುವರೆಗೂ ಆದ ಅನ್ಯಾಯ ಮುಂದಿನ ದಿನಗಳಲ್ಲಿ ಆಗಬಾರದು. ರಾಜಧಾನಿಯಲ್ಲಿ ಮೀಸಲಾತಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಹೋರಾಟಕ್ಕೆ ಎಲ್ಲಾ ತಾಲೂಕು, ಜಿಲ್ಲೆಗಳಿಂದ ಬೆಂಬಲ ನೀಡಬೇಕು. ಸರ್ಕಾರವನ್ನು ಒತ್ತಾಯಿಸಿ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿಕೊಳ್ಳಬೇಂದು ಸಂಘಟನೆಗಳ ಪದಾಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.
ಬಳಿಕ ಮೇ.10 ರಂದು ಜಿಲ್ಲಾ ವ್ಯಾಪ್ತಿಯ 7 ತಾಲೂಕು ಕೇಂದ್ರಗಳಲ್ಲಿ ಏಕಕಾಲಕ್ಕೆ ತಹಶೀಲ್ದಾರರ ಮುಖಾಂತರ ಮುಖ್ಯ ಮಂತ್ರಿಗಳಿಗೆ ಜಿಲ್ಲೆಯ ಮರಾಟಿ, ಕೊರಗ ಹಾಗೂ ಮಲೆಕುಡಿಯ ಸಮುದಾಯದ ಬಾಂಧವರು ಸೇರಿ ಮನವಿಯನ್ನು ಸಲ್ಲಿಸಲಾಯಿತು. 1958ರ ನಂತರ ನಡೆದ 1961 ರ ಜನಗಣತಿಯಲ್ಲಿ ಪರಿಶಿಷ್ಟ ಪಂಗಡದವರ ಜನಸಂಖ್ಯೆ 1,92,096 ರಷ್ಟಿದ್ದು, ಇದು ಒಟ್ಟಾರೆ ಜನಸಂಖ್ಯೆಯಲ್ಲಿ ಶೇಕಡ 0.81 ರಷ್ಟಿರುತ್ತದೆ. ಈ ಸಂದಂರ್ಭದಲ್ಲಿ ಪರಿಶಿಷ್ಠ ಪಂಗಡದವರಿಗೆ ಸರ್ಕಾರ ಶೇಕಡಾ 3 ರ ಮೀಸಲಾತಿ ಪ್ರಮಾಣವನ್ನು ನಿಗದಿ ಪಡಿಸಿತ್ತು. ಮುಂದಿನ 5 ಜನಗಣತಿಯಲ್ಲಿ ಭಾರಿಪ್ರಮಾಣದಲ್ಲಿ ಹೆಚ್ಚಾಗಿ 2011 ರಲ್ಲಿ ಅದು 42,48,987 ಆಗಿತ್ತು.. ಅಂದರೆ ಪರಿಶಿಷ್ಟ ಪಂಗಡದವರ ಜನಸಂಖ್ಯೆ 1961 ರ ಜನಗಣತಿಗೆ ಹೋಲಿಸಿದಲ್ಲಿ 22.11 ರಷ್ಟು ಹೆಚ್ಚಾಗಿದೆ. ಆದರೆ ಮೀಸಲಾತಿ ಪ್ರಮಾಣ ಅಷ್ಟೇ ಇರುವುದರಿಂದ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾಯಿಯನ್ನು ಹೆಚ್ಚಿಸುವಂತೆ ಆಗ್ರಹಿಸಿ ಮೇ.20 ರಂದು ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ತಿಳಿದರು. ಈ ಸಂದರ್ಭದಲ್ಲಿ ರಾಷ್ಟ್ರ ಮಲೆಕುಡಿಯ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಧರ ಗೌಡ ಉಪಸ್ಥಿತರಿದ್ದರು.