ಖಾತೆಗೆ ರೂ.10 ಲಕ್ಷ ಪ್ರಧಾನಿ ಮೋದಿ ಹಾಕಿದ್ದಾರೆಂದು ಸಾಲ ತೀರಿಸಿ ಪೇಚಿಗೆ ಸಿಲುಕಿದ ವ್ಯಕ್ತಿ!

ತೆಲಂಗಾಣ ಮೇ.16: ತಮ್ಮ ಬ್ಯಾಂಕ್ ಖಾತೆಗೆ ಬಿದ್ದ 10 ಲಕ್ಷ ಹಣವನ್ನು ಪ್ರಧಾನಿ ಮೋದಿಯವರು ಹಾಕಿದ್ದಾರೆ ಎಂದು ಕೊಂಡು ವೈಯಕ್ತಿಕ ಸಾಲ ತೀರಿಸಲು ಉಪಯೋಗಿಸಿ ವ್ಯಕ್ತಿಯೊಬ್ಬರು ಪೇಚಿಗೆ ಸಿಲುಕಿಕೊಂಡ ಘಟನೆ ತೆಲಂಗಾಣದಲ್ಲಿ ನಡೆದಿದೆ.

ಮಹೇಶ್ ಎಂಬುವವರು ತಮ್ಮ ಖಾತೆಗೆ ಬಿದ್ದ ಹಣವನ್ನು ಪ್ರಧಾನಿಗಳು ನೀಡಿದ್ದಾರೆ ಎಂದು ಕೊಂಡು ಈ ಹಣವನ್ನು ತಮ್ಮ ವೈಯಕ್ತಿಕ ಸಾಲ ತೀರಿಸಲು ಬಳಸಿಕೊಂಡಿದ್ದಾರೆ. ಆದರೆ ಬ್ಯಾಂಕ್ ಸಿಬ್ಬಂದಿಯಿಂದ ಕರೆ ಬಂದಾಗ ಅವರಿಗೆ ಶಾಕ್ ಆಗಿದೆ. ಬ್ಯಾಂಕ್‍ನವರು ಹಣವನ್ನುವಾಪಸ್ ಮಾಡುವಂತೆ ಒತ್ತಾಯ ಮಾಡಿದ್ದರಿಂದ ಇನ್ನೆಲ್ಲೋ ಸಾಲ ಮಾಡಿ ಆರು ಲಕ್ಷ ರೂಪಾಯಿಯನ್ನು ಮಹೇಶ್ ಬ್ಯಾಂಕ್‍ಗೆ ಮರಳಿಸಿದ್ದಾರೆ. ಆದರೆ ಉಳಿದ ಹಣ ವಸೂಲಿಗೆ ಅವರು ಯಾರ ಸಂಪರ್ಕಕ್ಕೂ ಸಿಗದೇ ತಲೆಮರೆಸಿ ಕೊಂಡಿದ್ದು, ಬ್ಯಾಂಕ್‍ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ವಾಸ್ತವವಾಗಿ ನಡೆದ್ದು ಏನೆಂದರೆ, ತೆಲಂಗಾಣದ 15 ಮಂದಿ ಎಸ್‍ಬಿಐ ಗ್ರಾಹಕರ ಅಕೌಂಟ್‍ಗೆ ತಲಾ 10 ಲಕ್ಷ ರೂಪಾಯಿಯಂತೆ ಒಟ್ಟು 1.5 ಕೋಟಿ ರೂಪಾಯಿ ಜಮೆ ಆಗಿತ್ತು. ಈ 15 ಮಂದಿ ಪೈಕಿ ಹೆಚ್ಚಿನವರು ಪ್ರಧಾನಿ ನರೇಂದ್ರ ಮೋದಿಯವರೇ ತಮ್ಮ ಅಕೌಂಟ್‍ಗೆ ಹಣವನ್ನು ಹಾಕಿದ್ದಾರೆಂದು ನಂಬಿ ಸಂಭ್ರಮ ಪಟ್ಟುಕೊಂಡಿದ್ದಾರೆ. ಆದರೆ ಇವರ ಖಾತೆಗೆ ಹಣ ಬಿದ್ದಿರುವುದರ ಹಿಂದಿನ ಅಸಲಿ ಕತೆ ಬೆರೆಯೇ ಇದೆ.

ಈ ಎಲ್ಲಾ 15 ಗ್ರಾಹಕರ ಬ್ಯಾಂಕ್‍ಗೆ ತಲಾ 10 ಲಕ್ಷ ರೂಪಾಯಿ ಬಂದಿರುವುದು ನಿಜ. ಆದರೆ ಅದು ಪ್ರಧಾನಿಯರು ನೀಡಿರುವ ಹಣ ಅಲ್ಲ ಬದಲಾಗಿದೆ, ಎಸ್‍ಬಿಐ ಸಿಬ್ಬಂದಿಯೊಬ್ಬರ ಎಡವಟ್ಟಿನಿಂದಾಗಿ ಇವರ ಬ್ಯಾಂಕ್ ಖಾತೆಗಳಿಗೆ ಹಣ ಜಮೆ ಆಗಿದೆ. ಹೌದು ಎಸ್‍ಬಿಐ ಸಿಬ್ಬಂದಿಯೊಬ್ಬರು ಏನೋ ಟೈಪ್ ಮಾಡುವಾಗ ಮಾಡಿದ ತಪ್ಪಿನಿಂದ ಸರ್ಕಾರದ ದಲಿತ ಬಂಧು ಯೋಜನೆಗಾಗಿ ಇರಿಸಲಾಗಿದ್ದ ಹಣ ಈ ರೀತಿ ತಪ್ಪಾಗಿ ವರ್ಗಾವಣೆಯಾಗಿದೆ. ಹಣವನ್ನು ಜಮೆ ಮಾಡುವಾಗ ಏನನ್ನೋ ಟೈಪ್ ಮಾಡಲು ಹೋಗಿ ಇನ್ನೇನೋ ಟೈಪ್ ಮಾಡಿದ್ದೇ ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿದ್ದು, 15 ಮಂದಿ ಅಕೌಂಟ್‍ಗೆ ತಲಾ 10 ಲಕ್ಷ ರೂಪಾಯಿ ವರ್ಗಾವಣೆಗೊಂಡಿದೆ.

ಈ ವಿಚಾರದಲ್ಲಿ ಉಂಟಾಗಿರುವ ತಪ್ಪಿನ ಅರಿವಾಗುತ್ತಿದ್ದಂತೆ ಎಲ್ಲಾ ಗ್ರಾಹಕರನ್ನೂ ಸಂಪರ್ಕಿಸಿ ಹಣವನ್ನು ವಾಪಸ್ ಕೊಡುವಂತೆ ಬ್ಯಾಂಕ್ ಕೋರಿಕೊಂಡಿದೆ. ತಮ್ಮ ಬ್ಯಾಂಕ್ ಅಕೌಂಟ್‍ಗೆ ಪ್ರಧಾನಿ ಮೋದಿಯವರೇ ಹಣ ಕಳುಹಿಸಿದ್ದಾರೆ ಎಂದು ನಂಬಿದ್ದ ಬಹುತೇಕ ಗ್ರಾಹಕರು ತುಂಬಾ ನಿರಾಸೆಯಿಂದ ಹಣವನ್ನು ವಾಪಸ್ ಕೊಟ್ಟಿದ್ದಾರೆ. ಈ ಹಣದಿಂದ ತಾವು ಏನೇನು ಮಾಡಬಹುದು ಎಂದು ಕನಸು ಕಂಡಿದ್ದ ಗ್ರಾಹಕರು ಆ ದುಡ್ಡು ಕಣ್ತಿಪ್ಪಿನಿಂದ ಬಂದದ್ದು ಎಂದು ತಿಳಿದು ವಾಪಸ್ ಕೊಟ್ಟರು.14 ಮಂದಿಯೇನೋ ಹಣವನ್ನು ವಾಪಸ್ ಮಾಡಿದರು. ಆದರೆ ಈ ಹಣ ಪಡೆದವರ ಪೈಕಿ ಮಹೇಶ್ ಎಂಬ ಗ್ರಾಹಕ ಮಾತ್ರ ಹಣವನ್ನು ತಮ್ಮ ಸಾಲ ತೀರಿಸಲು ಬಳಸಿಕೊಂಡಿದ್ದು, ಪೇಚಿಗೆ ಸಿಲುಕಿಬಿಟ್ಟಿದ್ದಾರೆ ಅಲ್ಲದೆ  ತಮ್ಮದಲ್ಲದ ತಪ್ಪಿಗೆ ತಲೆ ಮರೆಸಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.

Leave a Reply

Your email address will not be published. Required fields are marked *

error: Content is protected !!