ಮಕ್ಕಳ ಆಸಕ್ತಿ, ಪ್ರತಿಭೆ ಕಂಡು ಪ್ರೋತ್ಸಾಹಿಸಿದರೆ ಉತ್ತಮ ಸಾಧನೆ ಸಾಧ್ಯ- ಡಾ.ತಲ್ಲೂರು
ಉಡುಪಿ: ನಮ್ಮ ಮಕ್ಕಳಲ್ಲಿ ಪ್ರತಿಭೆಗೆ ಬರವಿಲ್ಲ. ಅವರ ಆಸಕ್ತಿಯನ್ನು ಗುರುತಿಸಿ ಅವರಿಗೆ ಸೂಕ್ತ ವೇದಿಕೆ ನೀಡಿದಾಗ ಮಾತ್ರ ಅವರ ಪ್ರತಿಭೆ ಹೊರ ಬರಲು ಸಾಧ್ಯ. ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಅವರಿಗೆ ಗೌರವ ಪ್ರದಾನ ಮಾಡುವುದರಿಂದ ಅವರಲ್ಲಿ ಹೆಚ್ಚಿನ ಸಾಧನೆಗೆ ಪ್ರೇರಣೆ ನೀಡಿದಂತಾಗುತ್ತದೆ ಎಂದು ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.
ಅವರು ಭಾನುವಾರ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ ವತಿಯಿಂದ ಪೆರ್ಡೂರು ಬಳಿಯ ಹರಿಖಂಡಿಗೆ ಶ್ರೀಮಹಾಲಸಾ ನಾರಾಯಣೀ ದೇವಳದ ಸಭಾಂಗಣದಲ್ಲಿ ಹಮ್ಮಿಕೊಂಡ ರಾಜ್ಯ ಮಟ್ಟದ ಮಕ್ಕಳ ಪ್ರತಿಭಾ ಸಂಗಮ ಕಾರ್ಯಕ್ರಮದಲ್ಲಿ ಸಾಧಕ ಮಕ್ಕಳಿಗೆ `ಕರ್ನಾಟಕ ಪ್ರತಿಭಾ ರತ್ನ ‘ ಗೌರವ ಪ್ರದಾನ ಮಾಡಿ ಮಾತನಾಡಿದರು.
ಕಲೆ, ಆಸಕ್ತಿಗೆ ವಯಸ್ಸಿನ ನಿರ್ಬಂಧವಿಲ್ಲ. ಆದರೆ ಕಲಿಯಬೇಕು ಎನ್ನುವ ತುಡಿತವೊಂದಿದ್ದರೆ ಸಾಕು ಅದು ಅವರನ್ನು ಯಶಸ್ಸಿನ ಉತ್ತುಂಗಕ್ಕೆ ಕೊಂಡೊಯ್ಯುತ್ತದೆ ಎನ್ನುವುದಕ್ಕೆ ನಾನೇ ಸಾಕ್ಷಿ ಎಂದ ಅವರು ತಾವು ೬೦ರ ಹರೆಯದಲ್ಲಿ ಯಕ್ಷಗಾನ ಕಲಿತು 200 ಕ್ಕೂ ಅಧಿಕ ಯಕ್ಷಗಾನ ಪಾತ್ರಗಳನ್ನು ಯಶಸ್ವಿಯಾಗಿ ನಿರ್ವಹಿಸಿರುವುದನ್ನು ನೆನಪಿಸಿದರು.
ಸಾಧನೆಯ ಪಥದಲ್ಲಿ ನಿಂದನೆಗಳು ಬರುವುದು ಸಹಜ: ನಿಂದನೆಗಳು ಬಂದಾಗ ಕುಗ್ಗದೆ, ಹೊಗಳಿಕೆಗೆ ಉಬ್ಬದೆ ನಿಮ್ಮ ಸಾಧನೆಯ ಗುರಿಯನ್ನು ತಲುಪಿ ಯಶಸ್ವಿಯಾಗಿ ಎಂದು ಅವರು ಮಕ್ಕಳಿಗೆ ಕರೆ ನೀಡಿದರು. ನೃತ್ಯ, ಯಕ್ಷಗಾನದಂತಹ ಕಲೆಯನ್ನು ಅಭ್ಯಾಸಿಸಲು ಮಕ್ಕಳಿಗೆ ಹೆತ್ತವರು ಪ್ರೋತ್ಸಾಹಿಸಬೇಕು. ಸಂಘ ಸಂಸ್ಥೆಗಳು ಅವರ ಪ್ರತಿಭೆಗೆ ವೇದಿಕೆ ಒದಗಿಸಬೇಕು. ಇದರಿಂದ ದೈಹಿಕ, ಮಾನಸಿಕ ವಿಕಸನದ ಜೊತೆಗೆ ಶೈಕ್ಷಣಿಕೆ ಪ್ರಗತಿಯೂ ಸಾಧ್ಯವಾಗಲಿದೆ. ಬರೀ ಅಂಕಗಳನ್ನು ಪಡೆದರೆ ಸಾಲದು, ಅದರೊಂದಿಗೆ ಪಠ್ಯೇತರ ಚಟುವಟಿಕೆಗಳಿಗೂ ಮಕ್ಕಳು ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು.ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ `ಕರ್ನಾಟಕ ಪ್ರತಿಭಾ ರತ್ನ ‘ಗೌರವ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸಮಿತಿಯ ರಾಜ್ಯಾಧ್ಯಕ್ಷ ಡಾ.ಶೇಖರ ಅಜೆಕಾರು, ಗೌರವಾಧ್ಯಕ್ಷ ಉಡುಪಿ ವಿಶ್ವನಾಥ ಶೆಣೈ, ದೇವಳದ ಧರ್ಮದರ್ಶಿ ಸುರೇಶ್ ಜಿ.ಪೈ, ಡಾ.ರಶ್ಮಿ ಅಮ್ಮೆಂಬಳ, ಬಿಂದು ಕೆ.ಎ., ಸಂಧ್ಯಾ ಶೆಣೈ ಮತ್ತಿತರರು ಉಪಸ್ಥಿತರಿದ್ದರು