ವಿದ್ಯಾವಂತರನ್ನು ಆತ್ಮಹತ್ಯೆಯತ್ತ ತಳ್ಳುತ್ತಿರುವುದು ಸರಕಾರದ ವೈಫಲ್ಯಕ್ಕೆ ಸಾಕ್ಷಿ- ಅಶೋಕ್ ಕೊಡವೂರು

ಉಡುಪಿ ಮೇ.16 (ಉಡುಪಿ ಟೈಮ್ಸ್ ವರದಿ): ಸರಕಾರದ ಯುವ ಸಬಲೀಕರಣದ ಹುಸಿ ಭರವಸೆಗಳು ವಿದ್ಯಾವಂತ ಯುವ ಜನಾಂಗವನ್ನು ಆತ್ಮಹತ್ಯೆಯ ಪಥದತ್ತ ತಳ್ಳುತ್ತಿರುವುದು ಬಿಜೆಪಿ ಸರಕಾರದ ಆಡಳಿತದಲ್ಲಿ ಮಾಮೂಲಿ. ಇದು ಈ ಸರಕಾರದ ವೈಫಲ್ಯಕ್ಕೆ ಸಾಕ್ಷಿಯಾಗಿದ್ದು, ಉದ್ಯೋಗ ಇಲ್ಲದ ಕಾರಣಕ್ಕೆ ನೊಂದು ಮೂಡುಬೆಳ್ಳೆಯ ಶಿರ್ವದ ಸಹನಾ ಆತ್ಮಹತ್ಯೆಗೆ ಆಳುವ ಸರಕಾರವೇ ನೇರ ಹೊಣೆಯಾಗಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಆರೋಪಿಸಿದ್ದಾರೆ.

ಈ ಬಗ್ಗೆ ಇಂದು ಉಡುಪಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಮೂಡುಬೆಳ್ಳೆಯ ಶಿರ್ವದ ಬಡ ಕುಟುಂಬದ ಎಂ.ಬಿ.ಎ ಪಧವೀದರೆ ಸಹನಾ ಕುಂದರ್ ಉದ್ಯೋಗಕ್ಕಾಗಿ ಅಲೆದಲೆದು ಸೋತು ನಿರಾಸೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವುದು ವಿಷಾದನೀಯ. ಇದು ಪ್ರಜಾತಂತ್ರ ವ್ಯವಸ್ಥೆಯ ನಾಗರೀಕ ಸಮಾಜ ತಲೆತಗ್ಗಿಸಬೇಕಾದ ವಿಚಾರವಾಗಿದೆ. ಈ ಆತ್ಮಹತ್ಯೆಯ ಪ್ರಕರಣಕ್ಕೆ ಆಳುವ ಸರಕಾರವೇ ನೇರ ಹೊಣೆಯಾಗಿದೆ. ಇವಳ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕಾದುದು ಸರಕಾರದ ಕರ್ತವ್ಯ, ಆ ನೆಲೆಯಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಅವಳ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಸರಕಾರವನ್ನು ಒತ್ತಾಯಿಸುತ್ತದೆ ಎಂದು ತಿಳಿಸಿದರು.

ಆಕೆ ತನ್ನ ಡೆತ್ ನೋಟಿನಲ್ಲಿ ನನ್ನ ಸಾವಿಗೆ ನಿರುದ್ಯೋಗವೇ ಮುಖ್ಯ ಕಾರಣವೆಂದು ಹೇಳಿದ್ದಾಳೆ. ಸರಕಾರದ ಯುವ ಸಬಲೀಕರಣದ ಹುಸಿ ಭರವಸೆಗಳು ವಿದ್ಯಾವಂತ ಯುವ ಜನಾಂಗವನ್ನು ಅತ್ಮಹತ್ಯೆಯ ಪಥದತ್ತ ತಳ್ಳುತ್ತಿರುವುದು ಹೊಸತೇನಲ್ಲ. ಬಿಜೆಪಿ ಸರಕಾರದ ಆಡಳಿತದಲ್ಲಿ ಇದು ಮಾಮೂಲಿ. ದೇಶದಲ್ಲಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗ 2 ಕೋಟಿ ಉದ್ಯೋಗ ಸೃಷ್ಟಿ ನನ್ನ ಗುರಿ ಎಂದಿದ್ದರು. ಆದರೆ ಆ ಭರವಸೆ ಇಂದು ಹುಸಿಯಾಗಿದೆ. ದೇಶದಲ್ಲಿ ಕಳೆದ 5 ವರ್ಷಗಳಲ್ಲಿ 40,000 ಯುವಕ ಯುವತಿಯರು ಆತ್ಮಹತ್ಯೆ ಯ ದಾರಿ ಹಿಡಿದಿದ್ದಾರೆ. ಇದು ಈ ಸರಕಾರದ ಆಡಳಿತ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಪ್ರತೀ 1 ಗಂಟೆಗೆ ಓರ್ವ ವಿದ್ಯಾವಂತ ಯುವಕ ಯುವತಿಯರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.  ಇದು ಈ ಸರಕಾರದ ವೈಫಲ್ಯಕ್ಕೆ ಸಾಕ್ಷಿಯಾಗಿದೆ ಎಂದರು.

ದೇಶದಲ್ಲಿ 60 ಕೋಟಿ 25 ವರ್ಷ ಕೆಳಗಿನ ಮತ್ತು 18 ವರ್ಷ ಮೇಲಿನ ವಿದ್ಯಾವಂತ ಯುವ ಜನಾಂಗವಿದ್ದು, ಪ್ರಸಕ್ತ ಪರಿಸ್ಥಿತಿಯಲ್ಲಿ 20 ಶೇಕಡಾ ಪದವೀದರರು ಮಾತ್ರ ಉದ್ಯೋಗ ಪಡೆಯುತ್ತಿದ್ದಾರೆ. 80 ಶೇಕಡಾ ಮಂದಿ ಉದ್ಯೋಗಕ್ಕಾಗಿ ಈಗಲೂ ಅಲೆದಾಡುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಮೋದಿ ಸರಕಾರದ ಅವೈಜ್ಞಾನಿಕ ಆರ್ಥಿಕ ಮತ್ತು ಆಡಳಿತ ನೀತಿ, ಕಾಂಗ್ರೆಸ್ ಸರಕಾರ ತನ್ನ 70ವರ್ಷಗಳ ಆಡಳಿತಾವಧಿಯಲ್ಲಿ ಯುವ ಜನಾಂಗದ ಉದ್ಯೋಗ ಸೃಷ್ಟಿ ಮತ್ತು ದೇಶದ ಆರ್ಥಿಕ ಅಭಿವೃದ್ಧಿಯ ಗುರಿಯೊಂದಿಗೆ ನಿರ್ಮಿಸಿದ ಉದ್ದಿಮೆಗಳ ಮಾರಾಟದಿಂದುಂಟಾದ ಖಾಸಗೀಕರಣದ ಪರಿಣಾಮ ಉದ್ಯೋಗ ಸೃಷ್ಟಿ ಪ್ರತಿಶತ 28 ಕ್ಕೆ ಇಳಿದಿದೆ. ಇದರೊಂದಿಗೆ ದಿವಾಳಿಯ ಹೆಸರಲ್ಲಿ ಮುಖ್ಯವಾಗಿ ಉದಾ: ಕಿಂಗ್ ಪಿಶರ್, ಜೆಟ್ ಏರ್ವೇ ಸೇರಿ ಹತ್ತು ಹಲವು ಕಂಪೆನಿಗಳ ಮುಚ್ಚುವಿಕೆಯಿಂದಾದ ಉದ್ಯೋಗ ನಷ್ಟ ನಿರುದ್ಯೋಗವನ್ನು ಮತ್ತಷ್ಟು ಹೆಚ್ಚಿಸಿದೆ. ಕಳೆದ 7 ವರ್ಷಗಳಿಂದ ದೇಶದಲ್ಲಿ ಹೊಸ ಬೃಹತ್ ಉದ್ದಿಮೆಗಳ ಸೃಷ್ಟಿಯಾಗಿಲ್ಲ. ಇದಕ್ಕೆ, ಈ ಸರಕಾರದ ಇಚ್ಛಾಶಕ್ತಿಯ ಕೊರತೆಯೇ ಕಾರಣ ಎಂದಿದ್ದಾರೆ.

ಭ್ರಷ್ಟಾಚಾರದ ಕೂಪವಾಗಿರುವ ಈ ಸರಕಾರಕ್ಕೆ, ದೇಶದ ಅಭಿವೃದ್ಧಿಯ ಕಡೆಗೆ ಗಮನಕೊಡಲು ಸಮಯವಿಲ್ಲ. ಇದ್ದ ಸರಕಾರಿ ಉದ್ಯೋಗಾವಕಾಶಗಳು ಲಂಚಭಾಕತನದ ಕಬಂಧ ಬಾಹುವಿನಲ್ಲಿ ಸಿಕ್ಕಿ ನಲುಗುತ್ತಿದ್ದು, ಅವು ಹಣಕೊಟ್ಟವರ ಪಾಲಾಗುತ್ತಿವೆ. ರಾಜ್ಯದಲ್ಲಿ ಈಗಾಗಲೇ ಬೆಳಕಿಗೆ ಬಂದಿರುವ 40 ಪರ್ಸೆಂಟ್ ಕಮಿಷನ್ ಹಗರಣ, ಸಹಪ್ರಾಧ್ಯಾಪಕರ ನೇಮಕಾತಿ ಹಗರಣ, ಪಿಎಸ್‍ಐ ನೇಮಕಾತಿ ಹಗರಣ ಇವೆಲ್ಲ ಪರೋಕ್ಷ ಉದ್ಯೋಗ ನಷ್ಟಕ್ಕೆ ಕಾರಣಗಳೇ ಆಗಿವೆ. ಕೆಪಿಎಸ್ಸಿ ಯುಪಿಎಸ್ಸಿ ನೀಟ್ ಸಿಇಟಿ ಮುಂತಾದ ರಾಷ್ಟ್ರೀಯ ನೇಮಕಾತಿ ಪುಕಾರಗಳು ಆಳುವ ಸರಕಾರದ ಭ್ರಷ್ಯ ಕಪಿಮುಷ್ಟಿಯಲ್ಲಿದ್ದು ನಿಜವಾದ ಪ್ರತಿಭೆಗಳು ಮರೆಯಾಗುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಸಹನಾಳಂತ ಬಡ ಕುಟುಂಬದ ಹೆಣ್ಣು ಮಗಳು ಉದ್ಯೋಗ ಪಡೆಯುವುದು ಕಷ್ಟ ಸಾಧ್ಯವಾಗಿತ್ತು. ಆ ನೆಲೆಯಲ್ಲಿ ನಿರಾಶೆಯಿಂದ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸಹನಾ ಸಾವಿಗೆ ಆಳುವ ಸರಕಾರವೇ ನೇರ ಹೊಣೆಯಾಗಿದೆ. ಇವಳ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ವಕ್ತಾರ ಬಿಪಿನ್ ಚಂದ್ರ , ಪ್ರಧಾನಕಾರ್ಯದರ್ಶಿ ಕುಶಲ್ ಶೆಟ್ಟಿ , ಭಾಸ್ಕರ್ ರಾವ್ ಕಿದಿಯೂರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!