ಪೂಜಾಸ್ಥಳ ಆಕ್ರಮಿಸಿಕೊಂಡಿದ್ದರೆ ಮರು ಪರಿವರ್ತನೆ ಅನಿವಾರ್ಯ- ಪೇಜಾವರಶ್ರೀ
ಉಡುಪಿ ಮೇ.16 (ಉಡುಪಿ ಟೈಮ್ಸ್ ವರದಿ): ಯಾವುದೇ ಪೂಜಾಸ್ಥಳ ಆಗಿದ್ದರೂ ಕೂಡ ಒಂದು ಸಮಾಜದವರು ಖರೀದಿಸಿ ಮಾರ್ಪಾಟು ಮಾಡಿದ್ದರೆ ಸಮಸ್ಯೆ ಇಲ್ಲ ಆದರೆ ಆಕ್ರಮಿಸಿಕೊಂಡು ಪರಿವರ್ತನೆ ಮಾಡಿದ್ದರೆ ಮರು ಪರಿವರ್ತನೆ ಆಗಬೇಕಾದದ್ದು ಅನಿವಾರ್ಯ ಎಂದು ಪೇಜಾವರ ವಿಶ್ವಪ್ರಸನ್ನ ಶ್ರೀಗಳು ಹೇಳಿದ್ದಾರೆ.
ಈ ಬಗ್ಗೆ ಇಂದು ಉಡುಪಿಯಲ್ಲಿ ಮಾತನಾಡಿದ ಅವರು, ಯಾವುದೋ ಕಾರಣಕ್ಕೆ ಯಾವುದೋ ಕಾಲದಲ್ಲಿ ಧರ್ಮ ಕೇಂದ್ರಗಳು ಮಸೀದಿಗಳಾಗಿ ಪರಿವರ್ತಿತವಾಗಿರುತ್ತದೆ. ಯಾವುದೋ ದೇವಾಲಯವನ್ನು ಖರೀದಿ ಮಾಡಿ ಮಸೀದಿಯಾಗಿ ಪರಿವರ್ತಿಸಿದ್ದರೆ ನಮ್ಮ ಆಕ್ಷೇಪ ಇಲ್ಲ. ಯಾವುದೇ ಪೂಜಾಸ್ಥಳ ಆಗಿದ್ದರೂ ಕೂಡ ಒಂದು ಸಮಾಜದವರು ಖರೀದಿಸಿ ಮಾರ್ಪಾಟು ಮಾಡಿದ್ದರೆ ಸಮಸ್ಯೆ ಇಲ್ಲ ಆದರೆ ಆಕ್ರಮಿಸಿಕೊಂಡು ಪರಿವರ್ತನೆ ಮಾಡಿದ್ದರೆ ಮರು ಪರಿವರ್ತನೆ ಆಗಬೇಕಾದದ್ದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಈಗ ಆಗುತ್ತಿರುವ ಇಂತಹ ಬೆಳವಣಿಗೆಯನ್ನು ನಾವು ಸ್ವಾಗತಿಸುತ್ತೇವೆ ಎಂದರು.
ಹಿಂದೆ ಆಗಿಹೋದ ಬಗ್ಗೆ ಕೋರ್ಟ್ ತೀರ್ಮಾನ ಕೊಟ್ಟಿದ್ದಾದರೆ ಯಾರೂ ಇದನ್ನು ಹಿನ್ನಡೆ ಎಂದು ಭಾವಿಸಬಾರದು. ತಪ್ಪು ಆಗಿದ್ದರೆ ಅದು ತಪ್ಪೇ. ಯಾರು ಯಾವುದನ್ನು ಸಮರ್ಥನೆ ಮಾಡುವುದು ಸೂಕ್ತ ಅಲ್ಲ. ಹಿಂದೂಗಳ ಪೂಜಾ ಮಂದಿರವಾಗಿದ್ದರೆ ಹಿಂದುಗಳಿಗೆ ಬಿಟ್ಟುಕೊಡಿ, ಮುಸಲ್ಮಾನರ ದರ್ಗಾ ಆಗಿದ್ದರೆ ಮುಸಲ್ಮಾನರಿಗೆ ಬಿಟ್ಟುಕೊಡಬೇಕು. ಸುಪ್ರೀಂ ಕೋರ್ಟ್ ಮಾಡುವ ಮಾರ್ಗದರ್ಶನದಂತೆ ನಾವು ನಡೆಯುವುದು ಸೂಕ್ತ. ನ್ಯಾಯಾಲಯದ ತೀರ್ಪು ಎಲ್ಲರೂ ಪರಿಪಾಲಿಸಬೇಕು. ಸಂಘರ್ಷಕ್ಕೆ ಇಳಿಯದೆ ಸೌಹಾರ್ದತೆಯಿಂದ ಬಿಟ್ಟುಕೊಡಬೇಕು. ಶಾಂತಿ ನೆಮ್ಮದಿ ನೆಲೆಸಲು ಎಲ್ಲರೂ ಸಹಕರಿಸಬೇಕು ಎಂದು ಸಲಹೆ ನೀಡಿದರು.
ಇದೇ ವೇಳೆ ಧ್ವನಿವರ್ಧಕ ಬಳಕೆ ಬಗ್ಗೆ ಸುಪ್ರೀಂ ಕೋರ್ಟ್ ನೀಡಿರುವ ಮಾರ್ಗದರ್ಶನವನ್ನು ಪಾಲಿಸಬೇಕು ಎಂದು ಕರೆ ನೀಡಿದ ಅವರು, ವಿಶೇಷ ದಿನಗಳು ವಿಶೇಷ ಆಚರಣೆಗಳ ಸಂದರ್ಭದಲ್ಲಿ ಸಂಬಂಧಿಸಿದ ಇಲಾಖೆಯಲ್ಲಿ ವಿಶೇಷ ಅನುಮತಿ ಪಡೆದು ಧ್ವನಿವರ್ಧಕ ಬಳಕೆ ಮಾಡೋಣ ಎಂದು ಹೇಳಿದರು.