ಕೆಲಸಕ್ಕೆಂದು ವಿದೇಶಕ್ಕೆ ಹೋದಾತನ ಹತ್ಯೆ, ಒಂದೂವರೆ ವರ್ಷದ ಬಳಿಕ ಮೃತದೇಹ ಹೊರಕ್ಕೆ ತೆಗೆದು ತನಿಖೆ!

ಉಡುಪಿ ಮೇ.16: ಡಿ.ಎನ್.ಎ ಗಾಗಿ ಒಂದೂವರೆ ವರ್ಷಗಳ ಹಿಂದೆ ಬೀಡಿನಗುಡ್ಡೆ ರುದ್ರಭೂಮಿಯಲ್ಲಿ ಧಪನ ಮಾಡಲಾದ ಪಂಜಾಬ್ ಮೂಲದ ವ್ಯಕ್ತಿಯ ಮೃತದೇಹವನ್ನು ಪಂಜಾಬ್ ಪೊಲೀಸರು ಹೊರ ತೆಗೆಸಿ, ಮಾದರಿ ಸಂಗ್ರಹಿಸಿರುವ ಘಟನೆ ವರದಿಯಾಗಿದೆ.

2020ರ ಡಿ.16ರಂದು ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕೆಮ್ಮಣ್ಣು ಸಮೀಪದ ಮೂಡು ಕುದ್ರುವಿನ ಹೊಳೆಯಲ್ಲಿ ಪತ್ತೆಯಾದ ಅಪರಿಚಿತ ವ್ಯಕ್ತಿಯ ಮೃತದೇಹವನ್ನುಮರಣೋತ್ತರ ಪರೀಕ್ಷೆ ನಡೆಸಿ, ಮೃತದೇಹವನ್ನು ಜಿಲ್ಲಾಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿತ್ತು. ಆದರೆ ಮೃತರ ವಾರಸುದಾರರು ಯಾರು ಕೂಡ ಪೊಲೀಸ್ ಠಾಣೆಯನ್ನು ಸಂಪರ್ಕಿಸದ ಕಾರಣಕ್ಕಾಗಿ ಅಜ್ಜರಕಾಡು ಶವಗಾರದಲ್ಲಿದ್ದ ಈ ಮೃತದೇಹವನ್ನು ಅಪರಿಚಿತ ವ್ಯಕ್ತಿ ನೆಲೆಯಲ್ಲಿ ಮಲ್ಪೆ ಪೊಲೀಸರು ಬೀಡಿನಗುಡ್ಡೆ ರುದ್ರಭೂಮಿಯಲ್ಲಿ ಕಾನೂನು ಪ್ರಕ್ರಿಯೆ ನಡೆಸಿ ಧಪನ ಮಾಡಿದ್ದರು. 

ಇದೀಗ ಬೀಡಿನಗುಡ್ಡೆ ರುದ್ರ ಭೂಮಿಯಲ್ಲಿ ಧಪನ ಮಾಡಲಾದ ಅಪರಿಚಿತ ವ್ಯಕ್ತಿಯ ಮೃತ ದೇಹವು, ಪಂಜಾಬ್ ರಾಜ್ಯದ ಸದಾರ್ ಪೊಲೀಸ್ ಠಾಣಾ ವ್ಯಾಪ್ತಿಯ ಮೃತ ತೇಜೇಂದ್ರ ಸಿಂಗ್ (31) ಅವರ ಫೋಟೋದೊಂದಿಗೆ ಹೋಲಿಕೆ ಕಂಡು ಬಂದ ಹಿನ್ನೆಲೆಯಲ್ಲಿ ಪಂಜಾಬ್ ಪೊಲೀಸರು ಹೆಚ್ಚಿನ ತನಿಖೆಗಾಗಿ ಡಿ.ಎನ್.ಎ ಸಂಗ್ರಹಿಸಲು ಧಪನ ಮಾಡಲಾದ ಶವವನ್ನು ಹೊರತೆಗೆದು ಮಾದರಿ ಸಂಗ್ರಹಿಸಿದ್ದಾರೆ ಎಂದು ತಿಳಿದು ಬಂದಿದೆ.

2020ರ ಡಿಸೆಂಬರ್ ತಿಂಗಳಲ್ಲಿ ಉದ್ಯೋಗಕ್ಕಾಗಿ ವಿದೇಶಕ್ಕೆ ತೆರಳುವ ಸಲುವಾಗಿ ತೇಜೇಂದ್ರ ಸಿಂಗ್(31) ಮಂಗಳೂರಿಗೆ ಹೊರಟಿದ್ದರು. ಬಳಿಕ ಅವರು ತನ್ನ ಮನೆಯವರಿಗೆ ಡಿ.15ರಂದು ಕರೆ ಮಾಡಿ ತಾನು ಮಂಗಳೂರಿನಲ್ಲಿ ಇರುವುದಾಗಿ ಹೇಳಿದ್ದರು. ಅದರ ನಂತರ ಅವರ ಮೊಬೈಲ್ ಸ್ವಿಚ್‌ ಆಫ್ ಆಗಿತ್ತು. ಈ ಹಿನ್ನೆಲೆಯಲ್ಲಿ ಮನೆಯವರು ಸದಾರ್ ಪೊಲೀಸ್ ಠಾಣೆಯಲ್ಲಿ ತೇಜೇಂದ್ರಸಿಂಗ್ ಅವರನ್ನು ದುಷ್ಕರ್ಮಿಗಳು ಅಪಹರಿಸಿರುವುದಾಗಿ ದೂರು ನೀಡಿದ್ದರು. ಅದರಂತೆ ತನಿಖೆ ನಡೆಸಿದ ಅಲ್ಲಿನ ಪೊಲೀಸರಿಗೆ ಇದೊಂದು ಕೊಲೆ ಎಂಬುದಾಗಿ ತನಿಖೆಯಿಂದ ಕಂಡುಬಂತು. ಅದರಂತೆ ಈ ಬಗ್ಗೆ ಕೊಲೆ ಪ್ರಕರಣ ಬಗ್ಗೆ ತನಿಖೆ ತೀವ್ರಗೊಳಿಸಿದ ಅಲ್ಲಿನ ಪೊಲೀಸರು  ತೇಜೇಂದ್ರ ಅವರ ಫೋನ್ ಕರೆಯ ಜಾಡು ಹಿಡಿದುಕೊಂಡು ಮಂಗಳೂರಿಗೆ ಆಗಮಿಸಿದ್ದರು.  

ಇಲ್ಲಿ ತನಿಖೆ ಆರಂಬಿಸಿದ ಪೊಲೀಸರು ಮಂಗಳೂರು ಪಶ್ಚಿಮ ವಲಯ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ ಪತ್ತೆ ಯಾಗಿದ್ದ ಅಪರಿಚಿತ ಮೃತದೇಹಗಳ ಫೋಟೋ ವನ್ನು ಪರಿಶೀಲನೆ ನಡೆಸಿದರು. ಈ ವೇಳೆ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪತ್ತೆಯಾಗಿದ್ದ ಮೃತದೇಹವು ತೇಜೇಂದ್ರ ಸಿಂಗ್ ಫೋಟೋದೊಂದಿಗೆ ಹೋಲಿಕೆ ಆಗಿತ್ತು. ಹೀಗೆ ಮೃತದೇಹ ವನ್ನು ಪತ್ತೆ ಹಚ್ಚಿದ ಪೊಲೀಸರು, ಮಲ್ಪೆಗೆ ಆಗಮಿಸಿ ವಿಚಾರಿಸಿದರು. ಆಗ ಆ ಮೃತದೇಹವನ್ನು ದಫನ ಮಾಡಿರುವುದು ತಿಳಿದುಬಂತು.

ಹೆಚ್ಚಿನ ತನಿಖೆ ಹಿನ್ನೆಲೆಯಲ್ಲಿ ರುದ್ರಭೂಮಿಯಲ್ಲಿ ಧಪನ ಮಾಡಲಾಗಿದ್ದ ಮೃತದೇಹವನ್ನು ಪಂಜಾಬ್ ಪೊಲೀಸರ ಸಮ್ಮುಖದಲ್ಲಿ ಶನಿವಾರ ಹೊರ ತೆಗೆಯಲಾಯಿತು. ಡಿಎನ್‌ಎ ಮೂಲಕ ಈ ಮೃತದೇಹವು ತೇಜೇಂದ್ರಸಿಂಗ್ ಅವರದ್ದೆಯೇ ಎಂಬುದು ದೃಢಪಡಿಸಲು ಪಂಜಾಬ್ ಪೊಲೀಸರು, ಅಸ್ಥಿಪಂಜರದ ಕೆಲವೊಂದು ಮೂಳೆ ಹಾಗೂ ಮಾದರಿಯನ್ನು ಸಂಗ್ರಹಿಸಿದ್ದು, ಇದನ್ನು ಪಂಜಾಬ್ ರಾಜ್ಯಕ್ಕೆ ಕೊಂಡೊಯ್ದು ಡಿಎಎನ್ ಪರೀಕ್ಷೆಗೆ ಒಳಪಡಿಸಲಿದ್ದಾರೆ ಎಂದು ತಿಳಿದು ಬಂದಿದೆ. ಈ ಸಂದರ್ಭದಲ್ಲಿ ಉಡುಪಿ ತಹಶೀಲ್ದಾರ್ ಅರ್ಚನಾ ಭಟ್, ಮಲ್ಪೆ ಎಸ್ಸೈ ಶಕ್ತಿವೇಲು ಹಾಜರಿದ್ದರು. ಮೃತದೇಹ ಹೊರ ತೆಗೆಯಲು ಉಡುಪಿ ನಗರಸಭೆ ಸಿಬ್ಬಂದಿ, ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು ಸಹಕರಿಸಿದರು.

Leave a Reply

Your email address will not be published. Required fields are marked *

error: Content is protected !!