ಆರ್ಥಿಕ ಪರಿಸ್ಥಿತಿ ಬಗ್ಗೆ ಜನತೆ ಧ್ವನಿಯೆತ್ತದೇ ಹೋದರೆ ಮತ್ತೆಂದೂ ದೇಶ ಚೇತರಿಸಿಕೊಳ್ಳದು -ಸಿದ್ದರಾಮಯ್ಯ

ರಾಜಸ್ಥಾನ, ಮೇ.15: ಆತಂಕಕಾರಿ ಆರ್ಥಿಕ ಪರಿಸ್ಥಿತಿ ಬಗ್ಗೆ ಜನತೆ ಧ್ವನಿಯೆತ್ತದೇ ಹೋದರೆ ಮತ್ತೆಂದೂ ದೇಶ ಚೇತರಿಸಿಕೊಳ್ಳದು ಎಂದು  ವಿಪಕ್ಷ ನಾಯಕ ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರಾಜಸ್ಥಾನದ ಉದಯಪುರದಲ್ಲಿ ನಡೆಯುತ್ತಿರುವ ಎಐಸಿಸಿ ಚಿಂತನಾ ಶಿಬಿರದಲ್ಲಿ ದೇಶದ ಆರ್ಥಿಕತೆ ಕುರಿತಂತೆ ವಿಚಾರ ಮಂಡಿಸಿದ ಅವರು, ದೇಶದ ಈ ಹೊತ್ತಿನ ಆತಂಕಕಾರಿಯಾದ ಆರ್ಥಿಕ ಪರಿಸ್ಥಿತಿ, ಜನತೆ ಈ ಕೆಟ್ಟ ಸ್ಥಿತಿಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ, ಧ್ವನಿ ಎತ್ತದೇ ಹೋದರೆ ಮತ್ತೆಂದೂ ದೇಶ ಮೊದಲಿನ ಸ್ಥಿತಿಗೆ ಚೇತರಿಸಿಕೊಳ್ಳುವ ಸಾಧ್ಯತೆಗಳೇ ಇಲ್ಲ ಎಂದು ತಿಳಿಸಿದ್ದಾರೆ.

ಚಿಂತನಾ ಶಿಬಿರದಲ್ಲಿ ಸಿದ್ದರಾಮಯ್ಯ ಅವರು ಮಂಡಿಸಿದ ದೇಶದ ಆರ್ಥಿಕ ಪರಿಸ್ಥಿತಿ ಹಾಗೂ ಸೂಚಿಸಿರುವ ಪರಿಹಾರಗಳ ಸಾರಾಂಶ ಹೀಗಿದೆ.
1. ದೇಶದ ಆರ್ಥಿಕತೆ ದಿನದಿಂದ ದಿನಕ್ಕೆ ನಿರಾಶಾದಾಯಕ ಸ್ಥಿತಿಯತ್ತ ತಲುಪುತ್ತಿದೆ. ಜನರಿಗೆ ವಾಸ್ತವಾಂಶಗಳು ತಿಳಿಯಬಾರದೆಂದು ಅಂಕಿ ಅಂಶಗಳನ್ನು ತಿರುಚುವ ಕೆಟ್ಟ ಸಾಹಸಕ್ಕೆ ಸರ್ಕಾರ ಮುಂದಾಗಿದೆ. ಯೋಜನಾ ಆಯೋಗವನ್ನು ರದ್ದು ಮಾಡಿ ನೀತಿ ಆಯೋಗವನ್ನು ರಚಿಸಲಾಯಿತು. ಈ ನೀತಿ ಆಯೋಗದ ಕೆಲಸ ಕೇಂದ್ರ ಸರ್ಕಾರಕ್ಕೆ ಅಥವಾ ಬಿಜೆಪಿ ಸರ್ಕಾರಕ್ಕೆ ಬೇಕಾದ ಅಂಕಿ ಅಂಶಗಳನ್ನು ಸಿದ್ಧಪಡಿಸಿಕೊಡುವುದಾಗಿದೆ. ನ್ಯಾಯಬದ್ಧವಾಗಿ ನಡೆಸಬೇಕಾದ ಸಮೀಕ್ಷೆಗಳನ್ನು ನಡೆಸುವುದನ್ನು ಕೇಂದ್ರ ಸರ್ಕಾರ ನಿಲ್ಲಿಸಿಬಿಟ್ಟಿದೆ. ಉದಾಹರಣೆಗೆ ‘ಎನ್ ಎಸ್ ಎಸ್ ಓ’ದೇಶದ ಬಡತನ, ಹಸಿವು, ಉದ್ಯೋಗ ಮುಂತಾದ ವಿಷಯಗಳ ಮೇಲೆ ಸಮೀಕ್ಷೆ ನಡೆಸಿ ಆಡಳಿತ ನಡೆಸುವ ಸರ್ಕಾರಗಳಿಗೆ ವಾಸ್ತವಾಂಶದ ಸ್ಥಿತಿ ಗತಿಗಳನ್ನು ಮಂಡಿಸುತ್ತಿತ್ತು. ಈ ಸಂಸ್ಥೆಯ ಸಮೀಕ್ಷೆಗಳನ್ನೆ ಸಂಪೂರ್ಣ ನಿಲ್ಲಿಸಲಾಗಿದೆ. 2017-18ರಲ್ಲಿ ಸಮೀಕ್ಷೆ ನಡೆಸುವಂತೆ ಸೂಚಿಸಲಾಗಿತ್ತು. ಸಂಸ್ಥೆ ಸರ್ವೆಯನ್ನೂ ಮಾಡಿತು. ಆದರೆ ಸರ್ಕಾರದ ಕಾರ್ಯ ವೈಖರಿಗೆ ಸಂಪೂರ್ಣ ವಿರುದ್ಧವಾಗಿದೆ ಎಂಬುದು ತಿಳಿದ ಕೂಡಲೆ ಮೋದಿಯವರ ಸರ್ಕಾರ ಈ ಸಮೀಕ್ಷೆಯನ್ನು ಬಿಡುಗಡೆಯಾಗದಂತೆ ನೋಡಿಕೊಂಡಿತು. ಆದರೂ ಕೆಲವು ಮಾಧ್ಯಮಗಳು ಸಮೀಕ್ಷೆಯ ವರದಿಯನ್ನೂ ಸೋರಿಕೆ ಮಾಡಿದವು. ವರದಿಯು ದೇಶದ ಸ್ಥಿತಿ ವಿಪರೀತ ಸಂಕಷ್ಟದತ್ತ ನಡೆಯುತ್ತಿದೆ ಎಂಬುದನ್ನು ಸೂಚಿಸುವುದಾಗಿತ್ತು.

2. ವಿಶ್ವ ಬ್ಯಾಂಕಿನ ಅಂಕಿ ಅಂಶಗಳ ಆಧಾರದ ಮೇಲೆ ನೋಡುವುದಾದರೆ 2004ರಲ್ಲಿ ಭಾರತದ ಒಟ್ಟು ಜಿಡಿಪಿ, 0.7 ಟ್ರಿಲಿಯನ್ ಡಾಲರುಗಳಿಷ್ಟಿತ್ತು. ಯುಪಿಎ ಸರ್ಕಾರದ ಅವಧಿಯಲ್ಲಿ ಇದನ್ನು 2.04 ಟ್ರಿಲಿಯನ್ ಡಾಲರ್ ಗಳಿಗೆ ಏರಿಕೆಯಾಯಿತು. 2019ರಲ್ಲಿ 2.87 ಟ್ರಿಲಿಯನ್ ಡಾಲರ್ ಇದ್ದದ್ದು 2020ರಲ್ಲಿ 2.62 ಟ್ರಿಲಿಯನ್ ಡಾಲರ್‍ಗೆ ಕುಸಿಯಿತು. 2021ರಲ್ಲಿ 2.71 ಟ್ರಿಲಿಯನ್ ರಷ್ಟಿದೆ. ಎಲ್ಲ ಪರಿಸ್ಥಿತಿಗಳು ಸರಿಯಾಗಿದ್ದರೆ 2022ರಲ್ಲಿ 2.88 ಟ್ರಿಲಿಯನ್ ಡಾಲರುಗಳಷ್ಟಾಗಬಹುದು ಎಂದು ಅಂದಾಜಿಸಲಾಗಿದೆ. ಪಿ.ಚಿದಂಬರಂ ಹೇಳುವ ಹಾಗೆ ಮೋದಿಯವರು ಇದ್ದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಡೆಯಲು ಬಿಟ್ಟಿದ್ದರೂ ಸಹ ಮುಂದಿನ ವರ್ಷದ ವೇಳೆಗೆ 5 ಟ್ರಿಲಿಯನ್ ಡಾಲರ್ ಎಕಾನಮಿ ನಮ್ಮದಾಗುತ್ತಿತ್ತು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ನೀತಿ ಆಯೋಗ, ಸಿಎಜಿ ಇವೆಲ್ಲವೂ ಬಿಜೆಪಿ ತಾಳಕ್ಕೆ ತಕ್ಕ ಹಾಗೆ ಕುಣಿಯುತ್ತಾ ದೇಶದ ಹಿತಾಸಕ್ತಿಯನ್ನು ಮರೆತಂತೆ ವರ್ತಿಸುತ್ತಿವೆ.

3. ಕೇಂದ್ರ ಸರ್ಕಾರದ ಹಣಕಾಸು ನೀತಿಯಿಂದ ರಾಜ್ಯಗಳ ಆರ್ಥಿಕತೆ ಹಾಳಾಗುತ್ತಾ ಒಕ್ಕೂಟ ವ್ಯವಸ್ಥೆ ದುರ್ಬಲವಾಗುತ್ತಿದೆ. ದೇಶದ ಎಲ್ಲ ರಾಜ್ಯಗಳ ಸಾಲ 2014 ರ ಮಾರ್ಚ್ ವೇಳೆಗೆ 24.71 ಲಕ್ಷ ಕೋಟಿ ಇತ್ತು. ಆದರೆ 2022 ರ ಮಾರ್ಚ್ ವೇಳೆಗೆ ಈ ಪ್ರಮಾಣ 70 ಲಕ್ಷ ಕೋಟಿಯನ್ನು ದಾಟುತ್ತಿದೆ. 2022 ರಲ್ಲಿ  ಮಾಡುವ ಸಾಲವೂ ಸೇರಿದರೆ ಈ ಪ್ರಮಾಣ 80 ಲಕ್ಷ ಕೋಟಿ ರೂಗಳಷ್ಟಾಗುತ್ತಿದೆ.

4. ಕೇಂದ್ರದ ನೀತಿಯಿಂದ ರಾಜ್ಯಗಳ ಸಾಲ ಮಾತ್ರ ಹೆಚ್ಚಾಗುತ್ತಿಲ್ಲ. ರಾಜ್ಯಗಳ ಫಿಸ್ಕಲ್ ಡೆಫಿಸಿಟ್ ಕೂಡ ಹೆಚ್ಚಾಗುತ್ತಿದೆ. ಮೋದಿಯವರು ಡಿಮಾನಿಟೈಸೇಷನ್ ಮಾಡುವ ವರೆಗೆ 2012-17ರವರೆಗೆ  ಪ್ರಧಾನವಾದ 14 ರಾಜ್ಯಗಳಲ್ಲಿ 4 ರಾಜ್ಯಗಳು ಮಾತ್ರ ಫಿಸ್ಕಲ್ ಡೆಫಿಸಿಟ್ ಸಮಸ್ಯೆಯನ್ನು ಎದುರಿಸುತ್ತಿದ್ದವು.  2021-22ರಲ್ಲಿ 2 ರಾಜ್ಯಗಳನ್ನು ಹೊರತುಪಡಿಸಿ ಉಳಿದೆಲ್ಲ ರಾಜ್ಯಗಳು ಫಿಸ್ಕಲ್ ಡೆಫಿಸಿಟ್ ಸಮಸ್ಯೆಯ ಸುಳಿಯಲ್ಲಿ ಸಿಲುಕಿಕೊಂಡಿವೆ. ಇಡೀ ದೇಶದ ಎಲ್ಲ ರಾಜ್ಯಗಳು ಇಂದು ರೆವಿನ್ಯೂ ಡೆಫಿಸಿಟ್ ಸಮಸ್ಯೆಯನ್ನು ಎದುರಿಸುತ್ತಿವೆ.

5. ದೇಶದ ಸಾಲದ ಕತೆಯೂ ಹೀಗೆ ಇದೆ. 2016-17ರಲ್ಲಿ  ಕೇಂದ್ರ ಸರ್ಕಾರದ ಸಾಲದ ಪ್ರಮಾಣ 76.25 ಲಕ್ಷ ಕೋಟಿಗಳಷ್ಟಿತ್ತು. 2020 ರ ಮಾರ್ಚ ವೇಳೆಗೆ 100.065 ಲಕ್ಷ ಕೋಟಿ ರೂಗಳಿಗೆ ಏರಿಕೆಯಾಯಿತು. 2022 ರ ಮಾರ್ಚ್ ವೇಳೆಗೆ 139.56 ಲಕ್ಷ ಕೋಟಿಗೆ ತಲುಪಿದೆ. 2023 ರ ಮಾರ್ಚ್ ವೇಳೆಗೆ ಇದರ ಪ್ರಮಾಣ ಕೇಂದ್ರ ಸರ್ಕಾರದ ಪ್ರಕಾರ 152.17 ಲಕ್ಷ ಕೋಟಿಗಳು. ವಾಸ್ತವವಾಗಿ 155 ಲಕ್ಷ ಕೋಟಿಗಳು ದಾಟಬಹುದೆಂದು ಅಂದಾಜು ಮಾಡಲಾಗಿದೆ.

6. ಕೇಂದ್ರ ಸರ್ಕಾರ 2019 ರ ಸೆಪ್ಟಂಬರ್ ನಲ್ಲಿ ಕಾರ್ಪೊರೇಟ್ ತೆರಿಗೆಯನ್ನು ಶೇ.30ರಿಂದ ಶೇ.22ಕ್ಕೆ ಇಳಿಸಿತು. ಪೆಟ್ರೋಲ್ ಮತ್ತು ಡೀಸೆಲ್ ವಿಧಿಸುತ್ತಿದ್ದ ಸೆಸ್ ಮತ್ತು ಸರ್ ಚಾರ್ಜ್‍ಗಳನ್ನು ಮೇ 2020ರಿಂದ ದಯನೀಯ ರೀತಿಯಲ್ಲಿ ಏರಿಕೆ ಮಾಡಿತು. 2019 ರಲ್ಲಿ ಮೋದಿ ಸರ್ಕಾರವನ್ನು ಅಧಿಕಾರಕ್ಕೆ ತರಲು ಶ್ರಮಿಸಿದ ಕಾರ್ಪೋರೇಟ್ ಕಂಪೆನಿಗಳಿಗೆ ಶೇ.8 ರಷ್ಟು ತೆರಿಗೆ ಕಡಿತದ ಲಾಭ ದೊರೆಯಿತು. ಆದರೆ ಓಟು ಹಾಕಿದ ಮತದಾರರುಗಳಿಗೆ ಭೀಕರ ಬರೆ ಬಿತ್ತು. ಒಂದು ಲೀಟರ್ ಪೆಟ್ರೋಲ್ ಮೇಲೆ 12 ರೂ ಸೆಸ್ ಮತ್ತು ಸರ್ ಚಾರ್ಜ್ ಅನ್ನು 2017 ರಿಂದ ವಿಧಿಸಲಾಗುತ್ತಿತ್ತು. ಅದನ್ನು 2020 ರ ಮೇ ತಿಂಗಳಿಂದ 30 ರೂಗಳಿಗೆ ಏರಿಸಲಾಯಿತು. ಡೀಸೆಲ್ ಮೇಲೆ 2017 ರ ಏಪ್ರಿಲ್ ನಲ್ಲಿ ಸೆಸ್ ಮತ್ತು ಸರ್ ಚಾರ್ಜ್ 6 ರೂ ಇತ್ತು. ಇದನ್ನು ಮೇ 2020 ರಂದು 27 ರೂ ಗೆ ಏರಿಕೆ ಮಾಡಲಾಯಿತು.

ಪರಿಹಾರಗಳೇನು?
1 ಕಾರ್ಪೊರೇಟ್ ತೆರಿಗೆಯನ್ನು ಹೆಚ್ಚು ಮಾಡಬೇಕು. ಬ್ರೆಝಿಲ್, ಫ್ರಾನ್ಸ್, ಜರ್ಮನಿ, ಆಸ್ಟ್ರೇಲಿಯ, ಮೆಕ್ಸಿಕೊ, ಪಾಕಿಸ್ತಾನ ಮುಂತಾದ ದೇಶಗಳಲ್ಲಿ ಕಾರ್ಪೊರೇಟ್ ತೆರಿಗೆ ಶೇ30ಕ್ಕಿಂತ ಹೆಚ್ಚಿದೆ. ನಮ್ಮಲ್ಲೂ ಹಿಂದೆ ಇದ್ದ ಶೇ. 32ರಷ್ಟು ತೆರಿಗೆ ವಿಧಿಸಬೇಕು. ಸಾಧ್ಯವಾದರೆ ಶೇ.35ಕ್ಕೆ ಏರಿಸಬೇಕು.
2 ಜಿಎಸ್‍ಟಿ ವ್ಯವಸ್ಥೆಯು ಈಗ ಸಂಪೂರ್ಣವಾಗಿ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದೆ. ಅದನ್ನು ಒಕ್ಕೂಟ ವ್ಯವಸ್ಥೆಗೆ ಪೂರಕವಾಗುವಂತೆ ನೋಡಿಕೊಳ್ಳಬೇಕು. ರಾಜ್ಯಗಳ ಆರ್ಥಿಕ ರಕ್ಷಣೆ ಮೊದಲ ಆದ್ಯತೆಯಾಗಬೇಕು.
3 ಕೇಂದ್ರ ಸರ್ಕಾರದ ಬಜೆಟ್ ಗಾತ್ರ ಮಾತ್ರ ದೊಡ್ಡದಾಗುತ್ತಿದೆ. ಆದರೆ ಜನರ ಕಲ್ಯಾಣ ಕಾರ್ಯಕ್ರಮಗಳಿಗೆ ಖರ್ಚು ಮಾಡುವ ಹಣದ ಪ್ರಮಾಣ ಕಡಿಮೆಯಾಗುತ್ತಿದೆ. ಕೇಂದ್ರದ ಬಜೆಟ್ ನಲ್ಲಿ 2022-23 ರಲ್ಲಿ ನೀಡುತ್ತಿರುವ ಸಬ್ಸಿಡಿಗಳು, 2021-22 ಕ್ಕೆ ಹೋಲಿಸಿದರೆ ಗಾಬರಿಯಾಗುವಷ್ಟು ಕಡಿಮೆಯಾಗಿವೆ. ಜನರ ಕಲ್ಯಾಣಗಳಿಗೆ ಒದಗಿಸುತ್ತಿರುವ ಅನುದಾನ ಜನರಿಗೆ ಅವಮಾನ ಮಾಡುವಂತೆ ಇವೆ. ಹಾಗಾಗಿ ನಾವು ಜನರ ಕಲ್ಯಾಣ ಕಾರ್ಯಕ್ರಮಗಳನ್ನು ಸರಿಯಾಗಿ ರೂಪಿಸಿ ಅನುದಾನಗಳನ್ನು ಒದಗಿಸಿ ಸಮರ್ಥವಾಗಿ ಅನುಷ್ಠಾನ ಮಾಡುವ ಕುರಿತು ಚರ್ಚಿಸಬೇಕು.
4 ಈ ಎಲ್ಲಾ ಸಂಗತಿಗಳನ್ನೂ ದೇಶದ ಜನರಿಗೆ ಸರಿಯಾಗಿ ಅರ್ಥ ಮಾಡಿಸುವ ಹೊಣೆಗಾರಿಕೆ ನಮ್ಮ ಮೇಲಿದೆ. ದೇಶದ ಜನರನ್ನು ಬಿಜೆಪಿ ಸರ್ಕಾರ ಹೇಗೆ ಅನಾಗರಿಕವಾಗಿ, ಅಮಾನವೀಯವಾಗಿ ಬೆಲೆ ಏರಿಕೆ-ಹಣದುಬ್ಬರದ ಮೂಲಕ ನಲುಗಿಸುತ್ತಿದೆ ಎನ್ನುವುದನ್ನು ಸರಿಯಾಗಿ ಅರ್ಥ ಮಾಡಿಸಬೇಕು. ಜನರಿಗೆ ದೇಶದ ಆರ್ಥಿಕ ಪರಿಸ್ಥಿತಿ ಗೊತ್ತಾಗದಂತೆ ಮಾಡಲು ಜಾತಿ ಮತ್ತು ಕೋಮು ದ್ವೇಷವನ್ನು ವ್ಯಾಪಕವಾಗಿ ಹರಡಿಸಲಾಗುತ್ತಿದೆ. ಮಾಧ್ಯಮಗಳ ಮೂಲಕ ಕೋಮು ದ್ವೇಷವೇ ದೇಶದ ಎಲ್ಲಾ ಸಮಸ್ಯೆಗಳ ಮೂಲ ಎನ್ನುವಂತೆ ಬಿಂಬಿಸಿ ತಮ್ಮ ಎಲ್ಲಾ ಲೋಪಗಳನ್ನೂ ಕೇಂದ್ರ ಸರ್ಕಾರ ಮುಚ್ಚಿಕೊಳ್ಳಲು ಹೆಣಗಾಡುತ್ತಿದೆ. ಇದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜನರಿಗೆ ಅರ್ಥ ಮಾಡಿಸಿ, ಸತ್ಯ ಸಂಗತಿಗಳನ್ನು ಜನರ ಮುಂದಿಡುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

Leave a Reply

Your email address will not be published. Required fields are marked *

error: Content is protected !!