ಮುಂದಿನ 25 ವರ್ಷ ಭಾರತಕ್ಕೆ ಅಮೃತಕಾಲ -ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
ಉಡುಪಿ ಮೇ.15: ಮುಂದಿನ 25 ವರ್ಷ ಭಾರತಕ್ಕೆ ಅಮೃತಕಾಲ ಎಂದು ಕೇಂದ್ರ ಹಣಕಾಸು ಮತ್ತು ಸಾಂಸ್ಥಿಕ ವ್ಯವಹಾರ ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ನಗರದ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸ್ಮಾರಕ ಸಭಾಂಗಣದಲ್ಲಿ ನಡೆದ ಮಣಿಪಾಲದ ಟಿ.ಎ.ಪೈ ಇನ್‌ಸ್ಟಿ ಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಟ್ಯಾಪ್ಮಿ) ಇದರ 36ನೇ ಘಟಿಕೋತ್ಸವದಲ್ಲಿ ಪದವಿ ಪ್ರದಾನ ಮಾಡಿ ಮಾತನಾಡಿದ ಅವರು,ಭಾರತ ದೀರ್ಘಕಾಲದ ಯೋಜನೆಯನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ದೇಶ ತನ್ನ ಡಿಜಿಟಲ್ ತಂತ್ರಜ್ಞಾನ, ಶೈಕ್ಷಣಿಕ ತಂತ್ರಜ್ಞಾನ, ಡಿಜಿಟಲ್ ನಿರ್ವಹಣೆ ಹಾಗೂ ಬ್ಯಾಂಕಿಂಗ್ ತಜ್ಞತೆಯ ಬಗ್ಗೆ ನಿಜವಾಗಿಯೂ ಹೆಮ್ಮೆಪಟ್ಟು ಕೊಳ್ಳಬೇಕಾಗಿದೆ. ಎಂದರು.
ಪ್ರಧಾನ ಮಂತ್ರಿ ಅವರು ಭಾರತ ವಿಶ್ವಗುರುವಾಗಬೇಕೆಂಬ ಬಯಕೆ ಹೊಂದಿದ್ದಾರೆ. ಅದೇನೂ ಕ್ಷುಲ್ಲಕ ವಿಷಯವಲ್ಲ ಎಂದು ಪ್ರತಿಪಾದಿಸಿದ ಅವರು, ಆರ್ಥಿಕ, ಶೈಕ್ಷಣಿಕ ಹಾಗೂ ಭವಿಷ್ಯದ ಸಂಪರ್ಕಗಳು ಭಾರತವನ್ನು ಖಂಡಿತ ವಿಶ್ವಗುರುವಾಗಿಸುತ್ತವೆ. ಪ್ರಧಾನಿಯವರ ಕನಸನ್ನು ನನಸು ಮಾಡುವತ್ತ ದೇಶವು ದಾಪುಗಾಲು ಹಾಕುತಿದೆ. ಭಾರತ ವಿಶ್ವ ಗುರುವಾಗಬೇಕೆನ್ನುವ ಪ್ರಧಾನಿ ಮೋದಿ ಕನಸು ನನಸಿಗೆ ಪ್ರತಿಯೊಬ್ಬ ವ್ಯಕ್ತಿ, ಸಂಸ್ಥೆಯೂ ಕೊಡುಗೆ ನೀಡಬೇಕು. ಹಳ್ಳಿಗಳಿಗೂ ತಂತ್ರಜ್ಞಾನ ತಲುಪಿಸಲು ಡಿಜಿಟಲ್ ವಿವಿ ಸ್ಥಾಪನೆಯಾಗಲಿದೆ ಎಂದು ಹೇಳಿದರು.
ಜನಸಾಮಾನ್ಯರಿಗೂ ಡಿಜಿಟಲ್ ಸೌಲಭ್ಯ ತಲುಪಬೇಕು. ಜಗತ್ತಿನ ನಾಯಕನಾಗಿ ಭಾರತ ಪರಿವರ್ತನೆಯಾಗ ಬೇಕು ಎಂದ ಅವರು, ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ ಜಾರಿಯೊಂದಿಗೆ ದೇಶದ 75 ಕೇಂದ್ರಗಳಲ್ಲಿ ಡಿಜಿಟಲ್ ಬ್ಯಾಂಕಿಂಗ್ ಸೆಂಟರ್ ಗಳು ಶೀಘ್ರ ಜಾರಿಗೆ ಬರಲಿವೆ. ವಿದ್ಯಾರ್ಥಿ, ಯುವಜನತೆ ಕೌಶಲ್ಯ ಗಳಿಕೆ ಮೂಲಕ ಸಮುದಾಯ ಸೇವೆ ಜತೆಗೆ ಭಾರತೀಯ ಆರ್ಥಿಕತೆ ವೃದ್ಧಿಗೆ ಸೇತುವೆಯಾಗಬೇಕು ಎಂದರು.
ಈ ಸಂದರ್ಭದಲ್ಲಿ ಮಾಹೆ ವಿವಿ ಪ್ರೊ ಚಾನ್ಸಲರ್ ಡಾ.ಎಚ್. ಎಸ್. ಬಲ್ಲಾಳ್, ಪ್ರಾಕ್ತನ ವಿದ್ಯಾರ್ಥಿನಿ ಸೋನು ಸೋಮಪಾಲನ್, ಟ್ಯಾಪ್ಮಿ ನಿರ್ದೇಶಕ ಪ್ರೊ. ಮಧುವೀರ್ ರಾಘವನ್ ಉಪಸ್ಥಿತರಿದ್ದರು.