ಕರಾವಳಿ ಶಿಕ್ಷಣದ ಹಬ್ ಇಲ್ಲಿ, ಅವಕಾಶ ವಂಚಿತರಿಗೂ ಪಾಲು ಸಿಗಬೇಕು- ಸಚಿವೆ ನಿರ್ಮಲಾ ಸೀತಾರಾಮನ್
ಉಡುಪಿ ಮೇ.15: ಶ್ರೀಕೃಷ್ಣ ಸೇವಾಧಾಮ ಟ್ರಸ್ಟ್ ವತಿಯಿಂದ ಕುಕ್ಕಿಕಟ್ಟೆಯಲ್ಲಿ ನಿರ್ಮಿಸಲಾದ ಶ್ರೀಕೃಷ್ಣ ಬಾಲನಿಕೇತನದಲ್ಲಿ ಶ್ರೀವಿಶ್ವೇಶತೀರ್ಥ ಸೇವಾಧಾಮದ ಉದ್ಘಾಟನಾ ಸಮಾರಂಭ ನಿನ್ನೆ ನಡೆಯಿತು.
ಶ್ರೀವಿಶ್ವೇಶತೀರ್ಥ ಸೇವಾಧಾಮವನ್ನು ಕೇಂದ್ರ ಹಣಕಾಸು ಹಾಗೂ ಸಾಂಸ್ಥಿಕ ವ್ಯವಹಾರ ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಮಾನವನ ಸೇವೆಯೇ ನಾರಾಯಣನ ಸೇವೆ. ಮಾನವ ಕಲ್ಯಾಣದ ಗುರಿಯ ಹಾದಿಯಲ್ಲಿ ಮಾನವನ ಸೇವೆಯೇ ಬದುಕಿನ ಧ್ಯೇಯವಾಗಬೇಕು ಎಂದರು. ಕರಾವಳಿ ಗುಣಮಟ್ಟದ ಶಿಕ್ಷಣದ ಹಬ್ ಆಗಿದ್ದು ಜನತೆ ಉದ್ಯಮಶೀಲರಾಗಿದ್ದಾರೆ, ಇಲ್ಲಿ ಅವಕಾಶ ವಂಚಿತರಿಗೂ ಪಾಲು ಸಿಗಬೇಕು. ಉಡುಪಿ ಶ್ರೀಕೃಷ್ಣಮಠದ ಹಾಗೂ ವಿಶೇಷವಾಗಿ ಪೇಜಾವರ ಮಠದ ಶ್ರೀವಿಶ್ವೇಶತೀರ್ಥರೊಂದಿಗಿನ ತಮ್ಮ ಸಂಬಂಧವನ್ನು ಸ್ಮರಿಸಿಕೊಂಡ ನಿರ್ಮಲಾ ಸೀತಾರಾಮನ್, ಹಿಂದೂ ಧರ್ಮಕ್ಕಾಗಿ ಶ್ರೀವಿಶ್ವೇಶತೀರ್ಥರ ತ್ಯಾಗ, ಕೊಡುಗೆಗಳನ್ನು ಸ್ಮರಿಸಿದರು.
ಪೇಜಾವರ ಮಠದ ಆಡಳಿತಕ್ಕೆ ಸೇರಿದ ಅನಾಥ ಮಕ್ಕಳ ಆಶ್ರಯ ಧಾಮ ಶ್ರೀಕೃಷ್ಣ ಬಾಲಕನಿಕೇತನ ದಲ್ಲಿರುವ ಚೈಲ್ಡ್ ಹೆಲ್ಪ್‌ಲೈನ್ ಮೂಲಕ ತೊಂದರೆಯಲ್ಲಿರುವ ಮಕ್ಕಳಿಗೆ ನೀಡುತ್ತಿರುವ ನೆರವು ಶ್ಲಾಘನೀಯ ಎಂದರು.
ಈ ವೇಳೆ ಕಾರ್ಯಕ್ರಮ ದಲ್ಲಿ ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥರು ಆಶೀರ್ವಚನ ನೀಡಿ, ಗರ್ಭಗುಡಿಯಲ್ಲಿ ರುವ ಪ್ರತಿಮೆ ಮಾತ್ರವಲ್ಲದೆ ಸಮಾಜದ ಪ್ರತಿಯೊಬ್ಬರಲ್ಲೂ ನಮ್ಮ ಗುರುಗಳು ದೇವರನ್ನು ಕಂಡಿದ್ದಾರೆ. ಅವಕಾಶ ವಂಚಿತ ಮಕ್ಕಳು ದಾರಿ ತಪ್ಪಿ, ಸಮಾಜ ಕಂಟಕರಾಗದೆ ಸಮಾಜದ ಆಸ್ತಿಯಾಗಲು ಶ್ರೀಕೃಷ್ಣ ಬಾಲನಿಕೇತನ ಸ್ಥಾಪಿಸಿದ್ದಾರೆ ಎಂದು ಹೇಳಿದರು.
ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ಸಹಾಯಕ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ಅವಕಾಶ ವಂಚಿತ ಮಕ್ಕಳ ಸರ್ವತೋಮುಖ ಅಭಿವೃದ್ಧಿ, ದೇಶದ ಉತ್ತಮ ಪ್ರಜೆಯಾಗಿಸಲು ಉತ್ತಮ ಶಿಕ್ಷಣ, ಸಂಸ್ಕಾರ ನೀಡುವ ಪೇಜಾವರಶ್ರೀಗಳ ಸಂಕಲ್ಪ ಶ್ಲಾಘನೀಯ. ಮಕ್ಕಳು, ಮಹಿಳೆಯರಿಗೆ ಅಗತ್ಯ ಬಿದ್ದಾಗ ಕೌನ್ಸಿಲಿಂಗ್ ನೆರವು ಸಿಗಬೇಕು ಎಂದರು.
ಕಾರ್ಯಕ್ರಮ ದಲ್ಲಿ ನಿವೃತ್ತ ಶಿಕ್ಷಕ ಮುರಲಿ ಕಡೆಕಾರ್ ಅವರಿಗೆ ಬಾಲ ವಾತ್ಸಲ್ಯ ಸಿಂಧು ಪ್ರಶಸ್ತಿ ಪ್ರದಾನ ಮಾಡಲಾಯಿತು.ಈ ಸಂದರ್ಭದಲ್ಲಿ ಉಡುಪಿ ಶಾಸಕ ಕೆ.ರಘುಪತಿ ಭಟ್, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಕಾರ್ಯನಿರ್ವಾಹಕ ನಿರ್ದೇಶಕ ಲಕ್ಷ್ಮೀನಾರಾಯಣ್, ಶ್ರೀಕೃಷ್ಣ ಸೇವಾಧಾಮ ಟ್ರಸ್ಟಿನ ಉಪಾಧ್ಯಕ್ಷ ಪ್ರೊ. ಕಮಲಾಕ್ಷ ಉಪಸ್ಥಿತರಿದ್ದರು. ಶ್ಯಾಮಲಾ ಪ್ರಸಾದ್ ಕಾರ್ಯಕ್ರಮ ನಿರೂಪಿಸಿ, ಟ್ರಸ್ಟ್‌ನ ಕಾರ್ಯದರ್ಶಿ ರಾಮಚಂದ್ರ ಉಪಾಧ್ಯಾಯ ಸ್ವಾಗತಿಸಿದರು.