ನವದೆಹಲಿ: ಕಟ್ಟಡದಲ್ಲಿ ಅಗ್ನಿ ದುರಂತ- ಮೃತರ ಸಂಖ್ಯೆ 27 ಕ್ಕೆ ಏರಿಕೆ
ನವದೆಹಲಿ ಮೇ.14: ಪಶ್ಚಿಮ ದೆಹಲಿಯ ಮುಂಡ್ಕಾ ಮೆಟ್ರೋ ನಿಲ್ದಾಣದ ಸಮೀಪವಿರುವ ಕಟ್ಟಡದಲ್ಲಿ ನಡೆದ ಅಗ್ನಿ ದುರಂತದಲ್ಲಿ ಮೃತರ ಸಂಖ್ಯೆ 27 ಕ್ಕೆ ಏರಿಕೆಯಾಗಿದೆ. ಪೊಲೀಸ್ ಸಿಬ್ಬಂದಿ ಕಟ್ಟಡದ ಕಿಟಕಿಗಳನ್ನು ಒಡೆದು ಒಳಗಡೆ ಸಿಲುಕಿದ್ದ ಜನರನ್ನು ಮತ್ತು ಗಾಯಾಳುಗಳನ್ನು ಸ್ಥಳಾಂತರಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ನಿನ್ನೆ ಮಧ್ಯಾಹ್ನದ ವೇಳೆಗೆ ಕಾಣಿಸಿಕೊಂಡ ಬೆಂಕಿ ಸಂಪೂರ್ಣ ಕಟ್ಟಡವನ್ನು ಆವಹಿಸಿದ್ದು 20 ಮಂದಿ ಸಜೀವ ದಹನವಾಗಿದ್ದಾರೆ. ರಾತ್ರಿ 11 ಗಂಟೆ ವೇಳೆಗೆ 26 ಮೃತದೇಹಗಳನ್ನು ಹೊರತೆಗೆಯಲಾಗಿದೆ. ಸ್ಥಳಕ್ಕೆ 14 ಅಗ್ನಿಶಾಮಕ ವಾಹನಗಳು ಧಾವಿಸಿದ್ದು, ಸುಮಾರು 7 ಗಂಟೆಗೂ ಹೆಚ್ಚು ಕಾಲ ಬೆಂಕಿ ನಂದಿಸಲು ಹರಸಾಹಸ ಪಡಲಾಯಿತು. ಸದ್ಯ ಬೆಂಕಿ ಆವರಿಸಿಕೊಂಡಿರುವುದು ನಿಂತಿದ್ದರೂ ದಟ್ಟ ಹೊಗೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ.
ಸಿಸಿ ಕ್ಯಾಮರಾ ಮತ್ತು ವೈ ಫೈ ರೂಟರ್ ತಯಾರಿಸುವ ಕೆಲಸ ಮೊದಲ ಅಂತಸ್ತಿನಲ್ಲಿ ನಡೆಯುತ್ತಿತ್ತು. ಮೊದಲ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಾಗ 70ಕ್ಕೂ ಹೆಚ್ಚು ಜನ ಕಟ್ಟಡದಲ್ಲಿದ್ದರು. ಬೆಂಕಿಯ ತೀವ್ರತೆಯ ಹಿನ್ನೆಲೆಯಲ್ಲಿ ಸಮೀಪದ ಕಟ್ಟಡಗಳನ್ನೂ ತೆರವು ಮಾಡಲಾಗಿದೆ. ಇನ್ನು ಘಟನೆ ಸಂಬಂಧ ಸಂಸ್ಥೆ ಮಾಲಕರಾದ ಹರೀಶ್ ಗೋಯೆಲ್ ಮತ್ತು ವರುಣ್ ಗೋಯೆಲ್ ಅವರನ್ನು ಬಂಧಿಸಲಾಗುವುದು ಎಂದು ಪೊಲೀಸ್ ಉಪ ಆಯುಕ್ತ ಸಮೀರ್ ಶರ್ಮಾ ತಿಳಿಸಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.