ಪ್ರಭಾವಿಗಳಿಗೆ ನೋಟಿಸ್‌ ನೀಡಿದ್ದಕ್ಕಾಗಿ ಡಿಜಿಪಿ ರವೀಂದ್ರನಾಥ್ ವರ್ಗಾವಣೆ: ಸಿದ್ದರಾಮಯ್ಯ

ಮೈಸೂರು: ನಕಲಿ ಜಾತಿ ಪ್ರಮಾಣಪತ್ರ ಪ್ರಕರಣದಲ್ಲಿ ಪ್ರಭಾವಿ ವ್ಯಕ್ತಿಗಳಿಗೆ ನೋಟಿಸ್ ನೀಡಿದ್ದಕ್ಕಾಗಿ ಹಿರಿಯ ಐಪಿಎಸ್ ಅಧಿಕಾರಿ ರವೀಂದ್ರನಾಥ್ ಅವರನ್ನು ವರ್ಗಾವಣೆ ಮಾಡಿರುವುದು ಗಂಭೀರ ಅಪರಾಧ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, ರವೀಂದ್ರನಾಥ್ ಎಂಬ ಹಿರಿಯ ಐಪಿಎಸ್ ಅಧಿಕಾರಿ ರಾಜೀನಾಮೆ ನೀಡಿದ್ದಾರೆ. ಅವರು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದಲ್ಲಿದ್ದರು. ನಕಲಿ ಜಾತಿ ಪ್ರಮಾಣಪತ್ರ ಪಡೆದವರ ಮೇಲೆ ತನಿಖೆ ಮಾಡಿ, ಕ್ರಮ ಕೈಗೊಳ್ಳುವುದು ಅವರ ಕರ್ತವ್ಯವಾಗಿತ್ತು. 

ರವೀಂದ್ರನಾಥ್ ಅವರು ಪ್ರಭಾವಿ ವ್ಯಕ್ತಿಗಳ ಬಗ್ಗೆ ತನಿಖೆ ಮಾಡಿದ್ದು, ಹಾಗಾಗಿ ಅವರನ್ನು ಸರಕಾರ ವರ್ಗಾವಣೆ ಮಾಡಿದೆ ಎಂದು ವರದಿಯಾಗಿದೆ ಹಾಗೂ ಸ್ವತಃ ರವೀಂದ್ರನಾಥ್ ಅವರೇ ಈ ಮಾತು ಹೇಳಿದ್ದಾರೆ. ಸರಕಾರ ಈ ರೀತಿ ಮಾಡಿದ್ದರೆ ಅದು ದೊಡ್ಡ ಅಪರಾಧ ಎಂದರು.

ರೇಣುಕಾಚಾರ್ಯ ತಮ್ಮ ಪುತ್ರಿಗಾಗಿ ಬೇಡ ಜಂಗಮ ಜಾತಿಯ ನಕಲಿ ಜಾತಿ ಪ್ರಮಾಣ ಪತ್ರ ತೆಗೆದು ಕೊಂಡಿದ್ದಾರೆ. ಈ ವಿಚಾರ ಸದನದಲ್ಲೂ ಚರ್ಚೆಯಾಗಿದೆ. ರೇಣುಕಾಚಾರ್ಯ ಬೇಡ ಜಂಗಮ ಜಾತಿ ಪ್ರಮಾಣಪತ್ರಕ್ಕೆ ಅರ್ಹರಲ್ಲ, ಈ ರೀತಿ ಸುಳ್ಳು ಜಾತಿ ಪ್ರಮಾಣಪತ್ರ ಪಡೆದವರ ಮೇಲೆ ಕಾನೂನು ರೀತಿ ಕ್ರಮ ತೆಗೆದುಕೊಳ್ಳಬೇಕಲ್ವ? ಎಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿರುತ್ತದೆ. ಅಲ್ಲಿ ಸುಭದ್ರ ಸರಕಾರ, ಜನಪರ ಆಡಳಿತ ಇರಲು ಸಾಧ್ಯವಿಲ್ಲ. ರಾಜ್ಯದಲ್ಲಿ ದುರ್ಬಲವಾದ ಭ್ರಷ್ಟ ಸರಕಾರವಿದೆ, ಇಂತಹ ಸರಕಾರದಲ್ಲಿ ನ್ಯಾಯ ಎಲ್ಲಿ ಸಿಗುತ್ತೆ? ಎಂದು ಸಿದ್ಧರಾಮಯ್ಯ ಕಿಡಿಕಾರಿದರು. 

Leave a Reply

Your email address will not be published. Required fields are marked *

error: Content is protected !!