ರಾಜ್ಯ ಸಚಿವ ಸಂಪುಟ ವಿಸ್ತರಣೆ ಸುಳಿವು- ಗೃಹ ಖಾತೆ ಸುನೀಲ್?, ಅಶೋಕ, ಸುಧಾಕರ್’ ಸಹಿತ ಐವರಿಗೆ ಕೊಕ್?
ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಬಿಜೆಪಿ ಹೈಕಮಾಂಡ್ ಇನ್ನೂ ಎರಡು ಮೂರು ದಿನಗಳಲ್ಲಿ ಪ್ರಮುಖ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸುಳಿವು ನೀಡಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಜತೆ ಅವರೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸುದೀರ್ಘ ಸಮಾಲೋಚನೆ ನಡೆಸಿ, ದೆಹಲಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಬೊಮ್ಮಾಯಿ ಅವರು, ರಾಜಕೀಯದ ಬೆಳವಣಿಗೆ ಹಾಗೂ ಸಂಪುಟದ ಪುನಾರಚನೆ ಬಗ್ಗೆ ಚರ್ಚೆಯಾಗಿದೆ. ರಾಜ್ಯದ ರಾಜಕೀಯ ವಿದ್ಯಮಾನ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ, ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಕುರಿತು ವರಿಷ್ಠರ ಜತೆ ಸಮಾಲೋಚನೆ ನಡೆಸಲಾಗಿದೆ. ಮುಂದಿನ ಸ್ಥಳೀಯ ಚುನಾವಣೆ ಗಮನದಲ್ಲಿಟ್ಟುಕೊಂಡು ಸಂಪುಟದ ಪುನಾರಚನೆ ಬಗ್ಗೆ ಎರಡು ಮೂರು ದಿನದಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಮುಂದೆ ಸಾಲು ಸಾಲು ಚುನಾವಣೆಗಳು ಎದುರಾಗಲಿವೆ, ಮುಂಬರಲಿರುವ ರಾಜ್ಯ ಸಭೆ, ಬಿಬಿಎಂಪಿ, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಬಗ್ಗೆಯೂ ಚರ್ಚೆ ಆಗಿದೆ ಎಂದರು. ತಕ್ಷಣಕ್ಕೆ ಸಂಪುಟ ಬದಲಾವಣೆ ಅಥವಾ ಪುನಾರಚನೆ ತೀರ್ಮಾನ ಇಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಬಸವರಾಜ ಬೊಮ್ಮಾಯಿ, ರಾಜಕೀಯ ಪಕ್ಷದಲ್ಲಿ ಯಾವಾಗ ಏನು ಬೇಕಾದರೂ ಅಗಬಹುದು. ಒಟ್ಟಾರೆ ರಾಜಕೀಯ ಸ್ಥಿತಿಗತಿಗಳ ಮೇಲೆ ನಿರ್ಣಯ ಆಗುತ್ತವೆ. ಪ್ರಸ್ತಕ ರಾಜಕೀಯ ಸ್ಥಿತಿಗತಿಯ ಬಗ್ಗೆ ವರಿಷ್ಠರಿಗೆ ತಿಳಿಸಿದ್ದೇನೆ. ಮುಂದಿನ ಒಂದು ವಾರದದಲ್ಲಿ ಸಂಪುಟ ಪುನಾರಚನೆ ಮತ್ತು ಚುನಾವಣೆ ವಿಚಾರದಲ್ಲಿ ಮಹತ್ವದ ಬೆಳವಣಿಗೆ ಅಗಲಿವೆ ಎಂದು ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕದಲ್ಲಿ ಸಂಪುಟ ವಿಸ್ತರಣೆ ಎಂಬುದು ಗುಜರಾತ್ ಮಾದರಿಯೋ ಅಥವಾ ಉತ್ತರ ಪ್ರದೇಶ ಮಾದರಿಯೋ ಎಂಬ ಪ್ರಶ್ನೆಗೆ ಉತ್ತರಿಸಿದ ಬೊಮ್ಮಾಯಿ, ಅದು ನಮ್ಮ ರಾಜಕೀಯ ಸ್ಥಿತಿ ಗತಿ ಮೇಲೆ ಆಗುತ್ತದೆ. ಇಲ್ಲಿನ ರಾಜಕೀಯ, ರಾಜಕಾರಣಿಗಳು, ರಾಜಕೀಯ ಸ್ಥಿತಿಗಳನ್ನು ಅವಲಂಬಿಸಿರುತ್ತದೆ ಎಂದಷ್ಟೇ ಮಾರ್ಮಿಕವಾಗಿ ನುಡಿದರು. ಬರುವ ಮೂರ್ನಾಲ್ಕು ದಿನದಲ್ಲಿ ಬೆಳವಣಿಗೆ ಆಗಲಿದೆ ಎಂದಷ್ಟೇ ತಿಳಿಸಿದರು. ಸಂಪುಟ ಪುನರ್ ರಚನೆಯಾದರೆ ಐವರು ಸಚಿವರನ್ನು ಕೈಬಿಡುವ ಸಾಧ್ಯತೆ ಇದ್ದು, ಆರ್ ಅಶೋಕ, ಶಶಿಕಲಾ ಜೊಲ್ಲೆ, ಡಾ.ಕೆ.ಸುಧಾಕರ್ ಮತ್ತು ಎಂಟಿಬಿ ನಾಗರಾಜ್ ಅವರ ಹೆಸರು ಕೇಳಿಬರುತ್ತಿದೆ. ಪ್ರೀತಂ ಗೌಡ, ಪೂರ್ಣಿಮಾ ಶ್ರೀನಿವಾಸ್,ತಿಪ್ಪಾರೆಡ್ಡಿ, ರಾಜುಗೌಡ, ಎನ್ ಮಹೇಶ್, ದತ್ತಾತ್ರೇಯ ಸಿ ರೇವೂರ್ ಮತ್ತು ಅರವಿಂದ್ ಬೆಲ್ಲದ್ ಅವರನ್ನು ಸಂಪಟಕ್ಕೆ ಸೇರಿಸಿಕೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ. ಗೃಹ ಸಚಿವ ಆರಗ ಜ್ಞಾನೇಂದ್ರ ಮತ್ತು ಇಂಧನ ಸಚಿವ ಸುನೀಲ್ ಕುಮಾರ್ ಅವರ ಖಾತೆಗಳು ಅದಲು ಬದಲಾಗುವ ಸಾಧ್ಯತೆಯಿದೆ. ಇತರ ಸಚಿವರ ಖಾತೆಗಳೂ ಬದಲಾಗಬಹುದು ಎಂದು ಮೂಲಗಳು ತಿಳಿಸಿವೆ.
ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಕುರುಬ ನಾಯಕ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಮರಳಿ ನೀಡಬೇಕಾಗಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಸ್ಥಾನವನ್ನು ಸಿಎಂ ಅವರು ಖಾಲಿ ಇರಿಸಿರುವುದು ಕುತೂಹಲ ಮೂಡಿಸಿದೆ.
ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ದೆಹಲಿಗೆ ತೆರಳಿದ್ದಾರೆ, ಆರ್ಎಸ್ಎಸ್ ನಿಷ್ಠರಾಗಿರುವ ಕಾರಣ ಸರ್ಕಾರ ಬದಲಾವಣೆ ಕುರಿತು ಹಲವು ವಿಷಯಗಳ ಬಗ್ಗೆ ಚರ್ಚಿಸಲು ಹೈಕಮಾಂಡ್ ಅವರನ್ನು ಕರೆದಿದೆ ಎಂಬ ಊಹಾಪೋಹಗಳು ಹರಿದಾಡುತ್ತಿವೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಮೇ 19 ರಂದು ನಡೆಯಲಿರುವ ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಭೆಗೆ ಬೊಮ್ಮಾಯಿ ಹೊರಡಲಿರುವ ಕಾರಣ ಸಂಪುಟ ಪುನರಾಚನೆ ಶೀಘ್ರದಲ್ಲೇ ಆಗಬಹುದು ಎಂದು ಮೂಲಗಳು ತಿಳಿಸಿವೆ.