ಮೋದಿಯಿಂದ ಎರಡು ಭಾರತ ಸೃಷ್ಟಿ, ಒಂದು ಶ್ರೀಮಂತರಿಗೆ ಮತ್ತೊಂದು ಬಡವರಿಗೆ: ರಾಹುಲ್ ಗಾಂಧಿ

ದಹೋದ್: ಪ್ರಧಾನಿ ನರೇಂದ್ರ ಮೋದಿ ಅವರು ಎರಡು ಭಾರತಗಳನ್ನು ಸೃಷ್ಟಿಸಿದ್ದಾರೆ. ಒಂದು ಶ್ರೀಮಂತರಿಗಾಗಿ ಮತ್ತೊಂದು ಬಡವರಿಗಾಗಿ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮಂಗಳವಾರ ಆರೋಪಿಸಿದ್ದಾರೆ. 

ಇಂದು ದಹೋದ್ ಜಿಲ್ಲೆಯಲ್ಲಿ ‘ಆದಿವಾಸಿ ಸತ್ಯಾಗ್ರಹ ರ್ಯಾಲಿ’ ನಡೆಸುವ ಮೂಲಕ ವರ್ಷದ ಅಂತ್ಯದಲ್ಲಿ ನಡೆಯುವ ಗುಜರಾತ್ ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ಚಾಲನೆ ನೀಡಿದ ರಾಹುಲ್ ಗಾಂಧಿ, ಪ್ರಧಾನಿ ಮೋದಿ ದೇಶದ ಸಂಪನ್ಮೂಲಗಳನ್ನು ಕೆಲವೇ ಕೆಲವು ಶ್ರೀಮಂತರಿಗೆ ನೀಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಇದೇ ವೇಳೆ ಈ ಬಾರಿ ಗುಜರಾತ್ ನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ ಎಂದ ರಾಹುಲ್ ಗಾಂಧಿ, 2014 ರಲ್ಲಿ, ನರೇಂದ್ರ ಮೋದಿ ಭಾರತದ ಪ್ರಧಾನಿಯಾದರು. ಅದಕ್ಕೂ ಮುನ್ನ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದರು. ಗುಜರಾತಿನಲ್ಲಿ ಆರಂಭಿಸಿದ ಕೆಲಸವನ್ನು ಅವರು ದೇಶದಲ್ಲಿ ಮಾಡುತ್ತಿದ್ದಾರೆ. ಇದನ್ನು ಗುಜರಾತ್ ಮಾದರಿ ಎಂದು ಕರೆಯಲಾಗುತ್ತದೆ” ಎಂದರು.

“ಇಂದು, ಎರಡು ಭಾರತಗಳನ್ನು ಸೃಷ್ಟಿಸಲಾಗುತ್ತಿದೆ. ಕೆಲವು ಆಯ್ದ ಜನರಿಗಾಗಿ ಒಂದು ಶ್ರೀಮಂತ ಭಾರತ. ಇದು ಅಧಿಕಾರ ಮತ್ತು ಹಣ ಹೊಂದಿರುವ ಬಿಲಿಯನೇರ್‌ಗಳು ಮತ್ತು ಅಧಿಕಾರಶಾಹಿಗಳದ್ದಾಗಿದೆ. ಎರಡನೇ ಭಾರತ ಸಾಮಾನ್ಯ ಜನರದ್ದಾಗಿದೆ” ಎಂದು ಅವರು ಹೇಳಿದರು.

‘ಬಿಜೆಪಿ ಆದಿವಾಸಿಗಳು ಮತ್ತು ಇತರ ಬಡವರಿಗೆ ಸೇರಿರುವ ನೀರು, ಅರಣ್ಯ, ಭೂಮಿಯಂತಹ ಸಂಪನ್ಮೂಲಗಳನ್ನು ಕೆಲವು ಶ್ರೀಮಂತರಿಗೆ ನೀಡುತ್ತಿದೆ ಎಂದು ಕಾಂಗ್ರೆಸ್ ನಾಯಕ ಆರೋಪಿಸಿದರು

Leave a Reply

Your email address will not be published. Required fields are marked *

error: Content is protected !!