ಕುಡುಕರ ತಾಣವಾದ ಉಡುಪಿಯ ಕ್ಲಾಕ್ ಟವರ್!
ಉಡುಪಿ, ಮೇ 3: ಸರ್ವಿಸ್ ಬಸ್ಸು ನಿಲ್ದಾಣದ ಬಳಿಯ ಗಡಿಯಾರ ಗೋಪುರ (ಕ್ಲಾಕ್ ಟವರ್) ಪರಿಸರದಲ್ಲಿ ಉದ್ಭವವಾಗಿರುವ ಸಮಸ್ಯೆಗಳನ್ನು ನಗರಾಡಳಿತ ಸುವ್ಯಸ್ಥೆಗೊಳಿಸುವಂತೆ ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ ಮೇಸ್ತ ಶಿರೂರು ಅವರು ಆಗ್ರಹಿಸಿದ್ದಾರೆ.
ಗಡಿಯಾರ ಗೋಪುರದ ಬಳಿ ಸಾರ್ವಜನಿಕ ಕುಡಿಯುವ ನೀರಿನ ನಳ ಇದ್ದು, ಅದು ಹಾಳು ಬಿದ್ದು ವರ್ಷವು ಸಂದಿದೆ. ನೀರು ತಂಪಾಗಿಸುವ ಶೀತಲೀಕೃತ ಯಂತ್ರವು ಹಾಳಾಗಿ ಜಂಗು ಹಿಡಿದುಕೊಂಡಿದೆ. ಯಂತ್ರ ರಕ್ಷಿಸಿಟ್ಟಿರುವ ಕೊಠಡಿಯು ಕುಡುಕರ ಶೌಚಾಲವಾಗಿ ಮಾರ್ಪಟ್ಟಿದೆ. ಬಿಸಿಲಿನ ತಾಪಮಾನ ಏರುಗತಿಯಲ್ಲಿದ್ದು, ಪ್ರಯಾಣಿಕರು, ಯಾತ್ರಾರ್ಥಿಗಳು, ಪ್ರವಾಸಿಗರು ಕುಡಿಯುವ ನೀರಿಗಾಗಿ ಹುಡುಕಾಟ ನಡೆಸಬೇಕಾದ ಪರಿಸ್ಥಿತಿ ಇಲ್ಲಿ ಎದುರಾಗಿದೆ.
ಗಡಿಯಾರ ಗೋಪುರದ ತಳಭಾಗದಲ್ಲಿ ಗಾಂಧಿ ಪ್ರತಿಮೆ ಇದ್ದು. ಅದರ ತಳದಲ್ಲಿ ಅಮಲೇರಿದ ಕುಡುಕರು ನಿದ್ರಿಸುತ್ತಿರುತ್ತಾರೆ. ಪರಿಸರದಲ್ಲಿ ಕಸ ತ್ಯಾಜ್ಯಗಳ ರಾಶಿ ಬಿದ್ದುಕೊಂಡಿದ್ದು ಪರಿಸರದಲ್ಲಿ ಗಬ್ಬು ವಾಸನೆ ಹರಡಿದೆ. ಗಡಿಯಾರ ಗೋಪುರದ ಸುತ್ತಲು ಅಳವಡಿಸಿರುವ ಆವರಣ ಬೇಲಿಯನ್ನು ಕಿಡಿಗೇಡಿಗಳು ಘಾಸಿಗೊಳಿಸಿ, ಕಲ್ಲು ಕಂಬಗಳನ್ನು ಉರುಳಿಸಿದ್ದಾರೆ.