ಉಡುಪಿ: ಬಾವಿಗೆ ಬಿದ್ದ ಮಹಿಳೆಯ ರಕ್ಷಿಸಿದ ಎಸೈ, ವ್ಯಾಪಕ ಪ್ರಶಂಸೆ
ಉಡುಪಿ: (ಉಡುಪಿ ಟೈಮ್ಸ್ ವರದಿ)ನಗರದ ಹೊರ ವಲಯದ ಕುಕ್ಕಿಕಟ್ಟೆಯ ಅಯ್ಯಪ್ಪ ಸ್ವಾಮಿ ಮಂದಿರದ ಎದುರಿನ ಮನೆಯೊಂದರ ಮಹಿಳೆಯೊರ್ವರು ಬಾವಿಗೆ ಹಾರಿದ್ದು, ಅವರನ್ನು ರಕ್ಷಿಸಿದ ನಗರ ಠಾಣಾ ಎಸೈ ಅವರ ಸಮಯೋಚಿತ ಕಾರ್ಯಕ್ಕೆ ವ್ಯಾಪಕ ಪ್ರಶಂಸೆಗೆ ಒಳಗಾಗಿದೆ.
ಘಟನೆ ವಿವರ: ಮನೆಯವರೊಂದಿಗೆ ಯಾವುದೋ ವಿಷಯಕ್ಕೆ ಅಸಮಾಧನಗೊಂಡ ಕುಕ್ಕಿಕಟ್ಟೆ ನಿವಾಸಿ ಶಾರದಾ (67) ತನ್ನ ಮನೆಯ ಬಾವಿಗೆ ಹಾರಿದ್ದರು. ಅಲ್ಲೇ ಹತ್ತಿರ ಇದ್ದ ಆಟೋ ಚಾಲಕ ರಾಜೇಶ ನಾಯ್ಕ್ ಮಾರ್ಪಳ್ಳಿ ಬಾವಿಯಲ್ಲಿ ಏನೋ ಶಬ್ದ ಕೇಳಿ, ತಕ್ಷಣ ಹೋಗಿ ನೋಡಿದ್ದಾರೆ. ಆಗ ಮಹಿಳೆ ಬಾವಿಯಲ್ಲಿ ಮುಳುಗುತ್ತಿದ್ದನ್ನು ನೋಡಿದ ರಾಜೇಶ್ ಹಗ್ಗದ ಸಹಾಯದಿಂದ ಬಾವಿಗೆ ಇಳಿದಿದ್ದರು. ನೀರಿನಲ್ಲಿ ಮುಳುಗುತ್ತಿದ್ದ ಶಾರದ ಅವರನ್ನು ಮೋಟರ್ ಪಂಪ್ಗೆ ಅಳವಡಿಸಿದ್ದ ಹಗ್ಗವನ್ನು ಹಿಡಿದು ತನ್ನನ್ನು ತಾನು ರಕ್ಷಿಸಿಕೊಳ್ಳಲು ಪ್ರಯತ್ನಿಸಿದ್ದರು.
ಬಾವಿಗೆ ಇಳಿದಿದ್ದ ರಾಜೇಶಗೆ ಶಾರದರನ್ನು ಮೇಲಕ್ಕೆ ಎತ್ತಲು ಸಾಧ್ಯವಾಗಿರಲಿಲ್ಲ, ಅಷ್ಟೋತ್ತಿಗೆ ಮಾಹಿತಿ ಪಡೆದ ನಗರ ಠಾಣಾ ಎಸೈ ಸದಾಶಿವ ರಾ ಗವರೋಜಿ ಹೊಯ್ಸಳ ವಾಹನದಲ್ಲಿ ಸ್ಥಳಕ್ಕೆ ಧಾವಿಸಿದ್ದರು.
ಸ್ಥಳದಲ್ಲಿನ ಪರಿಸ್ಥಿತಿ ಅರಿತ ಎಸೈ ಅವರು ಸ್ವತ: ಸಮವಸ್ತ್ರದಲ್ಲೇ ಬಾವಿಗೆ ಇಳಿದಿದ್ದರು, ಬಳಿಕ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ವಿನಾಯಕ್ ಅವರ ನೇತೃತ್ವದಲ್ಲಿ ಬಾವಿಯಲ್ಲಿದ್ದ ಮೂವರನ್ನು ಮೇಲಕ್ಕೆತ್ತಲಾಯಿತು. ಸ್ಥಳೀಯ ನಿವಾಸಿ ರಾಜೇಶ್ ಮತ್ತು ನಗರ ಠಾಣಾ ಎಸೈ ಸದಾಶಿವ ಅವರ ಸಮಯೋಚಿತ ಕಾರ್ಯಕ್ಕೆ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆಗೆ ಒಳಗಾಗಿದೆ.