ಉಡುಪಿಯಲ್ಲಿ ಮತ್ತೆ ಕೊರೋನಾ ಅಟ್ಟಹಾಸ: 8 ಮಕ್ಕಳು ಸಹಿತ 16 ಪಾಸಿಟಿವ್
ಉಡುಪಿ: ಜಿಲ್ಲೆಯಲ್ಲಿ ಸೋಮವಾರ ಮತ್ತೆ ಕೊರೋನಾ ಅಟ್ಟಹಾಸ ಮುಂದುವರೆದಿದ್ದು, ಮಧ್ಯಾಹ್ನದ ವೇಳೆ ಒಟ್ಟು16 ಮಂದಿಗೆ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ.
ಇದರಲ್ಲಿ 8 ಮಕ್ಕಳಿಗೆ ಸೋಂಕು ದೃಢ ಪಟ್ಟಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. 14 ಮಂದಿ ಮುಂಬೈ ನಿಂದ,ಇಬ್ಬರು ದುಬೈನಿಂದ ಬಂದವರಿಗೆ ಸೋಂಕು ದೃಢವಾಗಿದೆ.
ರಾಜ್ಯದಲ್ಲಿ ಕೊರೋನಾ ವೈರಸ್ ಸೋಂಕಿನ ಅಬ್ಬರ ಮುಂದುವರೆದಿದ್ದು, ಸೋಮವಾರ ಮತ್ತೆ 69 ಮಂದಿಯಲ್ಲಿ ಹೊಸದಾಗಿ ಸೋಂಕು ದೃಢಪಟ್ಟಿದೆ. ಅಲ್ಲದೆ, ಗ್ರೀನ್ ಝೋನ್ ರಾಮನಗರಕ್ಕೂ ಕೊರೋನಾ ವಕ್ಕರಿಸಿದ್ದು, ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,158ಕ್ಕೆ ಏರಿಕೆಯಾಗಿದೆ.
ಉಡುಪಿಯಲ್ಲಿ 16, ಯಾದಗಿರಿಯಲ್ಲಿ 15, ಕಲಬುರಗಿಯಲ್ಲಿ 14 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಉಳಿದಂತೆ ಬೆಂಗಳೂರು ನಗರದಲ್ಲಿ 6, ದಕ್ಷಿಣ ಕನ್ನಡದಲ್ಲಿ 3, ಬಳ್ಲಾರಿ 3 ಪ್ರಕರಣಗಳು ದೃಢಪಟ್ಟಿದೆ.
ಈ ನಡುವೆ ಗ್ರೀನ್ ಝೋನ್ ಪಟ್ಟಿಯಲ್ಲಿದ್ದ ರಾಮನಗರಕ್ಕೂ ಕೊರೋನಾ ವಕ್ಕಲಿಸಿದ್ದು, ಮೊದಲ ಸೋಂಕು ಪ್ರಕರಣ ಸೋಮವಾರ ಪತ್ತೆಯಾಗಿದೆ.
ಚೆನ್ನೈ ನಗರದಿಂದ ಬಂದಿದ್ದ ಮಗುವಿನಲ್ಲಿ ಕೊರೆನಾ ಪತ್ತೆಯಾಗಿದೆ. ಕಳೆದ ವಾರ ದಂಪತಿಗಳೊಂದಿಗೆ ಮಗು ಚೆನ್ನೈನಿಂದ ರಾಮನಗರದ ಮಾಗಡಿ ತಾಲೂಕಿನ ಗ್ರಾಮಕ್ಕೆ ಬಂದಿದ್ದರು ಎಂದು ಹೇಳಲಾಗುತ್ತಿದೆ.
ಈ ನಡುವೆ 2,158 ಮಂದಿ ಸೋಂಕಿತರ ಪೈಕಿ ಈ ವರೆಗೂ 680 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಇನ್ನೂ 1,433 ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಹಾಮಾರಿ ವೈರಸ್’ಗೆ ಬೆಂಗಳೂರು ಗ್ರಾಮಾಂತರದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದು, ಇದರಂತೆ ಈ ವರೆಗೂ ಹೆಮ್ಮಾರಿ ವೈರಸ್’ಗೆ ರಾಜ್ಯದಲ್ಲಿ 43 ಮಂದಿ ಬಲಿಯಾಗಿದ್ದಾರೆ