| ಉಡುಪಿ ಎ.2: ಕಂಬದ ಕೋಣೆ ಹಾಗೂ ಕೊಲ್ಲೂರು ನಡುವೆ 33 ಕೆ.ವಿ ಸಾಮರ್ಥ್ಯದ ಹೈಟೆನ್ಶನ್ ವಿದ್ಯುತ್ ಲೈನ್ ಅಳವಡಿಸುವುದಕ್ಕಾಗಿ ಬೈಂದೂರು ತಾಲೂಕಿನ ಕಾಲ್ತೋಡು ಹಾಗೂ ಗೋಳಿಹೊಳೆ ಗ್ರಾಮದ ಒಟ್ಟು 4.93 ಹೆಕ್ಟೇರ್ ಅರಣ್ಯ ಪ್ರದೇಶವನ್ನು ಮೆಸ್ಕಾಂಗೆ ನೀಡಲು ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯ, ರಾಜ್ಯ ಅರಣ್ಯ ಹಾಗೂ ಪರಿಸರ ಇಲಾಖೆಗೆ ಅನುಮತಿಯನ್ನು ನೀಡಿದೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಕೇಂದ್ರ ಅರಣ್ಯ ಸಚಿವಾಲಯ ಮಾಹಿತಿ ನೀಡಿದ್ದು, ರಾಜ್ಯ ಸರಕಾರ ಸಲ್ಲಿಸಿದ ಪ್ರಸ್ತಾಪವನ್ನು ಎಚ್ಚರಿಕೆಯಿಂದ ಪರಿಶೀಲಿಸಿದ ಬಳಿಕ ಕುಂದಾಪುರ ಅರಣ್ಯ ವಿಭಾಗಕ್ಕೆ ಸೇರಿದ ಬೈಂದೂರು ತಾಲೂಕು ಕಾಲ್ತೋಡು ಮತ್ತು ಗೋಳಿಹೊಳೆ ಗ್ರಾಮದ ಒಟ್ಟು 4.93ಹೆ. ಅರಣ್ಯ ಪ್ರದೇಶವನ್ನು ಕಂಬದಕೋಣೆ ಹಾಗೂ ಕೊಲ್ಲೂರು ನಡುವೆ ಸಾಗುವ 33 ಕೆವಿ ಎಚ್‌ಟಿ ವಿದ್ಯುತ್ ಲೈನ್ ಅಳವಡಿಸುವುದಕ್ಕಾಗಿ ಮೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್‌ಗೆ ನೀಡಲು ಅನುಮೋದನೆ ನೀಡಲಾಗಿದೆ.
ಹಾಗೂ ರಾಜ್ಯ ಅರಣ್ಯ ಇಲಾಖೆಯ ಕಟ್ಟುನಿಟ್ಟಿನ ನಿಗಾದಲ್ಲಿ ಅತ್ಯಂತ ಕನಿಷ್ಠ ಸಂಖ್ಯೆಯ ಮರಗಳನ್ನು ಕಡಿಯಬೇಕು. ಮರಗಳನ್ನು ಕಡಿಯುವ ಖರ್ಚನ್ನು ರಾಜ್ಯ ಅರಣ್ಯ ಇಲಾಖೆಯಲ್ಲಿ ಠೇವಣಿ ಇಡಬೇಕು. ಮೂಕಾಂಬಿಕಾ ಪರಿಸರ ಸೂಕ್ಷ್ಮ ವಲಯ ನಿರ್ವಹಣಾ ಸಮಿತಿಯ ಸಭೆಯಲ್ಲಿ ಮುಂದಿಟ್ಟ ಎಲ್ಲಾ ನಿಬಂಧನೆಗಳನ್ನು ತಪ್ಪದೇ ಪಾಲಿಸಬೇಕು. ಕಾಡನ್ನು ಕಡಿಯುವ ಸಂದರ್ಭದಲ್ಲಿ ಪ್ರದೇಶದ ಇತರೆ ಯಾವುದೇ ಜೀವವೈವಿಧ್ಯತೆಗೆ ಹಾನಿಯಾಗಬಾರದು. ಯೋಜನೆಗೆ ಬಳಸುವ ಪ್ರದೇಶ ಯಾವುದೇ ಕಾರಣಕ್ಕೂ 4.93ಹೆ.ನ್ನು ಮೀರಬಾರದು ಎಂದು ಅನುಮತಿ ಪತ್ರದಲ್ಲಿ ತಿಳಿಸಲಾಗಿದೆ.
ಇನ್ನು ಈ ವಿದ್ಯುತ್ ಲೈನ್ ಕಂಬದಕೋಣೆ, ಹೆರಂಜಾಲು, ಕಾಲ್ತೋಡು ಹಾಗೂ ಗೋಳಿಹೊಳೆ ಗ್ರಾಮಗಳ ಒಟ್ಟು 17.924ಕಿ.ಮೀ. ದೂರವನ್ನು ಕ್ರಮಿಸಲಿದೆ. ಇದರಲ್ಲಿ 4.294ಕಿ.ಮೀ. ಅರಣ್ಯ ಪ್ರದೇಶದಲ್ಲಿ ಸಾಗಲಿದೆ ಎಂದು ಅನುಮತಿ ಪತ್ರದಲ್ಲಿ ತಿಳಿಸಲಾಗಿದೆ. ಮಾತ್ರವಲ್ಲದೆ ಇದರಿಂದ ಕಾಡು ನಾಶವಾಗುವ ಕುಂದಾಪುರ ತಾಲೂಕು ಬೈಂದೂರು ಹೋಬಳಿ ಶಿರೂರು ಗ್ರಾಮದ ಭೂಪ್ರದೇಶದ ಎರಡರಷ್ಟು ಪ್ರದೇಶದಲ್ಲಿ (9.86ಹೆ) ಮರಗಳನ್ನು ನೆಟ್ಟು, ಕಾಡನ್ನು ಬೆಳೆಸುವ ಸಂಪೂರ್ಣ ಖರ್ಚು ಹಾಗೂ ನಿರ್ವಹಣೆಯನ್ನು ಮೆಸ್ಕಾಂ ವಹಿಸಿಕೊಳ್ಳಬೇಕು ಎಂದೂ ತಿಳಿಸಲಾಗಿದೆ. | |