ಅಣ್ಣ ತಮ್ಮಂದಿರ ಜಗಳ ಮದ್ಯದ ಬಾಟಲಿಯಿಂದ ಹಲ್ಲೆಯವರೆಗೆ..!

ಅಜೆಕಾರು ಮೇ.2(ಉಡುಪಿ ಟೈಮ್ಸ್ ವರದಿ): ಕುಡಿತ ಮತ್ತಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಅಣ್ಣ ತಮ್ಮಂದಿರ ನಡುವೆ ಜಗಳ ನಡೆದು ಸಹೋದರನ ಮೇಲೆಯೇ ಮದ್ಯದ ಬಾಟಲಿಯಿಂದ ಹಲ್ಲೆ ಮಾಡಿ ಜೀವ ಬೆದಿರಿಕೆ ಹಾಕಿರುವ ಘಟನೆ ಹೆಬ್ರಿ ತಾಲೂಕಿನ ಅಂಡಾರು ಗ್ರಾಮದ ಬೋರ್ಲುಬೆಟ್ಟು ಎಂಬಲ್ಲಿ ನಡೆದಿದೆ.

ಸ್ಥಳೀಯ ಕರುಣಾಕರ ರಾವ್ ಹಲ್ಲೆಗೊಳಗಾದವರು. ನಿನ್ನೆ ಕರುಣಾಕರ ರಾವ್ ಅವರು ತಮ್ಮ ದೊಡ್ಡಪ್ಪನ ಮಗ ರತ್ನಾಕರ ರಾವ್ ಹಾಗೂ ತಮ್ಮ ಸ್ನೇಹಿತ ರಾಜೇಶನೊಂದಿಗೆ ಬೋರ್ಲುಬೆಟ್ಟು ಹೌಸ್ ಎಂಬಲ್ಲಿನ ತಮ್ಮ ಮನೆಯಲ್ಲಿ ಮದ್ಯ ಸೇವಿಸುತ್ತಿದ್ದರು. ಈ ವೇಳೆ ಆರೋಪಿತ ರತ್ನಾಕರ ರಾವ್ ಕೆಟ್ಟದಾಗಿ ಮಾತನಾಡಿದ್ದು, ಅದಕ್ಕೆ ಕರುಣಾಕರ ರಾವ್ ಅವರು ನೀನ್ಯಾಕೆ ಕೆಟ್ಟದಾಗಿ ಮಾತನಾಡುತ್ತೀಯಾ ಎಂದು ಕೇಳಿದಕ್ಕೆ ರತ್ನಾಕರ ರಾವ್ ಒಮ್ಮೆಲೇ ಮದ್ಯದ ಖಾಲಿ ಬಾಟಲಿಯಿಂದ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಂತೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Leave a Reply

Your email address will not be published. Required fields are marked *

error: Content is protected !!