| ಉಡುಪಿ ಮೇ.2(ಉಡುಪಿ ಟೈಮ್ಸ್ ವರದಿ): ರಾಜ್ಯದ ವಿಧಾನ ಸಭಾ ಚುನಾವಣೆಯಲ್ಲಿ 20 ಕಡೆ ಒಬ್ಬರನ್ನೇ ನಿಲ್ಲಿಸಬೇಕಾದ ದಾರಿದ್ರ್ಯತೆ ಕಾOಗ್ರೆಸ್’ಗೆ ಬಂದಿದೆ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವ ಮತ್ತು ಕಾರ್ಕಳ ಶಾಸಕ ಸುನೀಲ್ ಕುಮಾರ್ ವ್ಯಂಗ್ಯವಾಡಿದ್ದಾರೆ.
20 ಕಡೆಗಳಲ್ಲಿ ಒಬ್ಬರನ್ನೇ ಚುನಾವಣೆಗೆ ಸ್ಪರ್ಧಿಸುವ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, 20 ಕಡೆ ಸ್ಪರ್ಧಿಸಲು ಅವರಿಗೆ ಯಾರು ಸಲಹೆ ನೀಡಿದ್ದಾರೆ ಗೊತ್ತಿಲ್ಲ. ಕಳೆದ ಬಾರಿ 2 ಕ್ಷೇತ್ರದಲ್ಲಿ ಸ್ಪರ್ಧಿಸಿ ಒಂದು ಕ್ಷೇತ್ರದಲ್ಲಿ ಸೋತು ಮತ್ತೊಂದು ಕ್ಷೇತ್ರದಲ್ಲಿ ಕಷ್ಟಪಟ್ಟು ಗೆದ್ದಿದ್ದಾರೆ. 20 ಕಡೆ ಒಬ್ಬರನ್ನೇ ನಿಲ್ಲಿಸಬೇಕಾದ ದಾರಿದ್ರ್ಯತೆ ಕಾOಗ್ರೆಸ್’ಗೆ ಬಂದಿದೆ ಅಂದರೆ 20 ಕಡೆಗಳಲ್ಲಿ ಬೇರೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಕಾಂಗ್ರೆಸ್ ಗೆ ಅಭ್ಯರ್ಥಿಗಳೇ ಇಲ್ಲ ಎಂದಾಯಿತು. ಅವರಿಗೆ ಅಭ್ಯರ್ಥಿಗಳ ಕೊರತೆ ಇದೆ ಎಂದಾದರೆ ಆ ಪಕ್ಷವನ್ನು ದೇವರೇ ಕಾಪಾಡಬೇಕು ಎಂದು ಲೇವಡಿ ಮಾಡಿದರು.
ಈ ವೇಳೆ ಹಿಂದಿ ಹೇಳಿಕೆ ವಿಚಾರವಾಗಿ ರಾಜ್ಯದಲ್ಲಿ ಎದ್ದಿರುವ ಗೊಂದಲಗಳ ಬಗ್ಗೆ ಸ್ಪಷ್ಟಪಡಿಸಿದ ಅವರು, ಕನ್ನಡ ಬಿಟ್ಟು ಬೇರೆ ಭಾಷೆ ಮಾತನಾಡಿ ಎಂದು ಎಲ್ಲೂ ಹೇಳಿಲ್ಲ. ಕರ್ನಾಟಕದಲ್ಲಿ ಕನ್ನಡವೇ ಪ್ರಾಧಾನ್ಯತೆ. ರಾಜ್ಯದಲ್ಲಿ ಹಿಂದಿ ಹೇರಿಕೆ ಇಲ್ಲವೇ ಇಲ್ಲ. ಜನರು ಇದನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ನಮ್ಮ ಮಾತೃ ಭಾಷೆ ಕನ್ನಡ ಅದನ್ನು ಬಳಸುವುದು ನಮ್ಮ ಹಕ್ಕು ನಾವು ಅದನ್ನು ಮಾಡಿಯೇ ಮಾಡುತ್ತೇವೆ. ಆದರೆ ಅನ್ಯ ರಾಜ್ಯದೊಂದಿಗೆ ಸಂಪರ್ಕ ಹಾಗೂ ಸರಕಾರಿ ವ್ಯವಹಾರ ನಡೆಸುವಾಗ ಹಿಂದಿ ಬಳಸಿ ಎಂದು ಕೇಂದ್ರ ಸರಕಾರ ಹೇಳಿದೆ. ಇದರಲ್ಲಿ ಏನು ತಪ್ಪಿದೆ ಎಂದು ಪ್ರಶ್ನಿಸಿದ್ದಾರೆ ಹಾಗೂ ಈ ವಿಚಾರದಲ್ಲಿ ಸುಮ್ಮನೆ ದಾರಿ ತಪ್ಪಿಸುವ ಕೆಲಸ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಮಸೀದಿ ಎದುರು ಭಜನೆ ನಡೆಸುವುದಾಗಿ ಹಿಂದೂ ಸಂಘಟನೆಗಳು ಹೇಳಿರುವ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಅವರು, ಎಲ್ಲಾ ಸಂಘಟನೆಗಳ ಚಟುವಟಿಕೆಗೆ ನಾನೇಕೆ ಪ್ರತಿಕ್ರಿಯೆ ನೀಡಲಿ. ಸರಕಾರ ಈ ಬಗ್ಗೆ ಎಚ್ಚರಿಕೆಯಿಂದ ಗಮನಿಸುತ್ತಿದೆ. ಆಯಾ ಸಂಬಂಧ ಪಟ್ಟ ಇಲಾಖಾ ಅಧಿಕಾರಿಗಳು, ಸಚಿವರು ಚರ್ಚೆಯನ್ನು ನಡೆಸುತ್ತಿದ್ದಾರೆ. ಸಂಘರ್ಷ ಹಾಗೂ ಶಾಂತಿ ಸುವ್ಯವಸ್ಥೆಗೆ ಭಂಗ ತರಲು ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಆಸ್ಪದ ನೀಡುವುದಿಲ್ಲ ಎಂದರು ಹಾಗೂ ಯಾವುದೇ ವಿಚಾರಕ್ಕೆ ಸಂಬಂಧಿಸಿ ನ್ಯಾಯಾಲಯದ ತೀರ್ಪನ್ನು ಅನುಷ್ಟಾನ ಮಾಡಲು ಸರಕಾರ ಬದ್ದವಾಗಿದೆ ಎಂದು ತಿಳಿಸಿದರು.
ಇನ್ನು ಬೆಳಗಾವಿ ಗಲಾಟೆ ಬಗ್ಗೆ ಮಾತನಾಡಿದ ಅವರು, ಬೆಳಗಾವಿಯ ಎಂಇಎಸ್ ಚಟುವಟಿಕೆಯನ್ನು ಹಾಗೂ ಕನ್ನಡ ವಿರೋಧಿ ಚಟುವಟಿಕೆಗಳನ್ನು ಯಾರು ಮಾಡಿದರೂ ಅದನ್ನು ಸಹಿಸಿಕೊಳ್ಳುವುದಿಲ್ಲ ಎಂದು ಈಗಾಗಲೇ ಹೇಳಿದ್ದೇವೆ. ಈ ಹಿಂದೆ ಇಂತಹ ಘಟನೆಗಳು ಅದಾಗ ಗೃಹ ಇಲಾಖೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದೆ. ಇನ್ಯಾರೋ ಅದಕ್ಕೆ ಪ್ರಚೋದನಕಾರಿ ಪೋಸ್ಟ್ ಗಳನ್ನು ಹಾಕಿದರೆ ಅಲ್ಲಿನ ಸ್ಥಳೀಯ ಜಿಲ್ಲಾಡಳಿತ, ಗೃಹ ಇಲಾಖೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುತ್ತದೆ ಎಂದು ಹೇಳಿದರು.
| |